ಶುಕ್ರವಾರ, ಜುಲೈ 17, 2015

ಸಾಫ್ಟ್ವೇರ್ ಉದ್ಯೋಗ -


ಎಲ್ಲರೂ ಬಯ್ಯಲು ನಾಲಿಗೆ ತುದಿಯಲ್ಲಿರುವ, ವಿಡಂಬನೆಗೆ ಸಹಕರಿಸುವ, ಎಲ್ಲ ತಂದೆ ತಾಯಿಯರೂ ತಮ್ಮ ಮಕ್ಕಳು ಅದಾಗಬೇಕೂ ಅಂತ ಬಯಸುವ, ಅದಾಗಿಸಿದ ಮೇಲೆ, ಅಯ್ಯೋ ಅವನು ನಮ್ಮ ಬಳಿ ಇರೋಲ್ಲ ಅಂತ ಗೋಳಾಡಿಸುವ ಉದ್ಯೋಗ. ಒಂದುತರ ಬೆಂಗಳೂರಿನ ಪರಿಸ್ಥಿತಿ ಈ ಉದ್ಯೋಗಿಗಳಿಗೆ. ಎಲ್ಲರಿಗೂ ಬೇಕು ಹಾಗೆ ಎಲ್ಲರಿಗೂ ಬೇಡ.

ಅದು ಯಾರ ಬಲವಂತವೂ ಇಲ್ಲದೆ, ಮುಂದೆ ಮಾಡುವ ಕೆಲಸದ ಪರಿವೂ ಇಲ್ಲದೆ ಶುಬ್ರ ಅನ್ನುವುದಕ್ಕಿಂತ ಖಾಲಿ ಮನಸ್ಸಿನಲ್ಲಿ ಇಂಜಿನಿಯರ್ ಕಾಲೇಜಿಗೆ ಸೇರಿದ ನಮ್ಮಂತ ಮನಸ್ಸುಗಳೇ ಬಹುತೇಕ. ಅದು ಏನು ಕಲಿಸಿದರೋ, ಅದು ಏನು ಕಲಿತೆವೋ. ಒಟ್ಟಿನಲ್ಲಿ ಒಂದು ಬೀಜವನ್ನು ಕುಂಡದಲ್ಲಿಟ್ಟು ಸಸಿ ಮಾಡಿ ಬದುಕಿಕೋ ಅಂತ ಬಯಲಿಗೆ ಬಿಟ್ಟರು.

ಬಯಲಿನ ಪರಿಸ್ಥಿತಿಗೆ ಹೊಂದಲಾರದೆ ಹಪತಪಿಸುತ್ತಿದ್ದ ಸಮಯದಲ್ಲಿ, ಆ ಸಸಿಯನ್ನು ಬೆಳೆಸಿ ಪೋಷಿಸಿ, ಫಲವನ್ನು ಪಡೆಯುತ್ತಿರುವುದು ಈ ಕ್ಷೇತ್ರಗಳು.
ಬೆಳೆದು ದೊಡ್ಡದಾದ ಮೇಲೆ, ನನ್ನ ಪ್ರಯತ್ನದಿಂದ ನಾನು ದೊಡ್ದದಾದೆ, ನೀ ಕೊಡುತ್ತಿರುವ ಆಹಾರ ನಾ ಕೊಡುತ್ತಿರುವ ಫಲಕ್ಕೆ ಸರಿ ಇಲ್ಲ. ಇದೇ ಫಲ ಅಲ್ಲಿ ಕೊಟ್ಟರೆ ಅಂತ ಯೋಚನೆ.

ಜ್ಞಾನದ ಆಳಕ್ಕೆ ಇಳಿಯಲು ಸಮಯದ ಅಭಾವವೋ, ಆಸಕ್ತಿಯ ಕೊರತೆಯೋ ಅಥವಾ ಅವಶ್ಯಕತೆ ಇಲ್ಲ ಎಂಬ ಭಾವವೋ, ಒಟ್ಟಿನಲ್ಲಿ, ಬಟ್ಟಲಿನಲ್ಲಿ ನೀರನ್ನು ತುಂಬಿಕೊಂಡು ಸಮುದ್ರದಂತೆ  ಬೀಗುತ್ತಾ, ಅವಶ್ಯಕತೆ ಬಿದ್ದಾಗ ಬಟ್ಟಲಿನ ನೀರು ಸಾಕಾಗದೆ, ತೊಳಲಾಡಿ, ಸರಸ್ವತಿಯಿಂದ ಲಕ್ಷ್ಮಿ ಅನ್ನೋದನ್ನು ಮರೆತು, ಲಕ್ಷ್ಮಿಗಾಗಿ ಸರಸ್ವತಿ ಅನ್ನೋ ಮನಸ್ಥಿತಿ ತಲುಪಿ, ಮತ್ತೆ, ಇದ್ದ ಬಟ್ಟಲಿನ ನೀರನ್ನೇ ಸೋಸಿ ತಯಾರು ಮಾಡಿಕೊಂಡು ಬೇರೆ ಜಾಗಕ್ಕೆ ಗುಪ್ತಗಾಮಿನಿಯoತೆ ಪ್ರವಹಿಸಿ ಬಿಡುವುದು. ಅಲ್ಲಿ ಮತ್ತದೇ ಆರ್ಭಟ.


ತಾವು ಮಾಡುತ್ತಿರುವ ಉದ್ಯೋಗವೊಂದನ್ನು ಬಿಟ್ಟು ಬೇರೆಲ್ಲಾ ಕೆಲಸಗಳು ಚೆನ್ನಾಗಿದೆ, ಏನೋ ಯಾವುದೋ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈ ಉದ್ಯೋಗ ಅನ್ನೋ ಭಾವವವನ್ನು ತೋರುತ್ತಾ, ನೆಮ್ಮದಿ ಕೆಳದುಕೊಂಡು, ಸಮೋಸ ಮಾರಿದ್ರೆ ಇದಕ್ಕಿಂತ ಜಾಸ್ತಿ ಬರ್ತಿತ್ತು, ಪಾನಿ ಪೂರಿಯೋನು ನಮಗಿಂತ ಜಾಸ್ತಿ ದುಡಿತಾನೆ ಅಂತ ಹಣದ ಲೆಕ್ಕದಲ್ಲಿ ತಮ್ಮನ್ನು ತಾವು ತೂಗಿಸಿಕೊಳ್ಳುತ್ತಾ ತಮ್ಮ ಜ್ಞಾನದ ದೇಹವನ್ನು ಬೆತ್ತಲಾಗಿಸಿ, ಗಂಟೆಗೊಂದು ಸಲ ಕಾಫಿ ಚಹಾ ಕುಡಿಯುವುದು,ಸಿಗರೇಟು ಸೇದುವುದು.
ಚಹಾ ಅಂಗಡಿಯವನು, ಪಾಪ! ಕೆಲಸ ಮಾಡಿ ಮಾಡಿ ತಲೆ ಕೆಟ್ಟಿರತ್ತೆ ಅಂತ ಅವಾ ಲೋಚಗುಟ್ತಾನೆ. ಆದ್ರೆ, ಹೋಗ್ತಾ ದುಡ್ಡು ಕೊಡುವಾಗ, ಎಸ್ಟ್ ದುಡಿತೀಯ ದಿನಕ್ಕೆ ಅಂತ ಕೇಳಿ ಇವ ಮುಂದಿನ ಚಹಾಕೆ ತಯಾರಿ ತಗೋತಾನೆ.

ಈ ಕೆಲಸ, ಬಿಡಿಸಿ ತಿನ್ನಬೇಕಾದ ಹಣ್ಣಿನoತೆ ಕಂಡರೆ, ಬೇರೆಲ್ಲಾ, ಬಿಡಿಸಿ ತಿನ್ನಲು ತಯಾರಾದ ಹಣ್ಣುಗಳoತೆ ಕಾಣುತ್ತವೆ.        

ಹಾಗೇ ಜಲಪಾತ ಕಾದoಬರಿಯಲ್ಲಿ ಓದಿದ್ದ ನೆನಪು, ಪ್ರಸವದ ನೋವು, ಸಹಜವಾಗಿ ಹೆರುವ ಎಲ್ಲ ಹೆಣ್ಣಿಗೂ ಒಂದೇ. ಅದನ್ನು ಮುಂದೆಬರುವ ಮಗುವಿಗಾಗಿ ಅವಡುಗಚ್ಚಿ ಅನುಭವಿಸುತ್ತಾಳೆ, ನೋವು ಬರದಿದ್ದಲ್ಲಿ ಹೆದರಿ ನೋವು ಬರಲಿ ಅಂತ ಭಗವಂತನಲ್ಲಿ ಪ್ರಾರ್ಥಿಸುತ್ತಾಳೆ ಅಂತ.            
         
-ಹರೀಶ್

ಶನಿವಾರ, ಜುಲೈ 11, 2015

ಸಿಹಿ ತಿನಿಸಿದವರ ಬಾಯಿಗೆ ಕಹಿ -

ಸುಮಾರು ೨ ತಿಂಗಳ ನಂತರ ಊರಿನ ನೆನಪಾಯಿತು, ಅದಕ್ಕೇ ದಿಡೀರನೆ ರೈಲಿನಲ್ಲಿ ತತ್ಕಾಲ ಟಿಕೆಟ್ ಪಡೆದು ಹೊರಟೆ.  ಬೆಳಗ್ಗೆ ೫ ಗಂಟೆಗೆ ಊರು ಮುಟ್ಟಿಸಿತು.
ನಮ್ಮ ಸಿದ್ರಾಮಯ್ಯನೋರು ಬಡವರ ಬಾಯಿಗೆ  ಅಕ್ಕಿ ಭಾಗ್ಯ ಕೊಟ್ಟ ಹಾಗೆ, ನಮ್ಮೂರಿಗೆ ವರುಣ  ಮಳೆ ಭಾಗ್ಯ ಕೊಟ್ಟಿದ್ದ. ಬರೋಣ ಬ್ಯಾಡವೋ ಅನ್ನೋ ತರ ಬರ್ತಿತ್ತು.

ಇಳಿದ ಕ್ಷಣ ಆಶ್ಚರ್ಯ, ೨ ತಿಂಗಳಲ್ಲಿ ಸಂಪೂರ್ಣ ಬದಲಾದ ಚಿತ್ರಣ.
ಹೊಸ ಪ್ಲಾಟ್ಫಾರ್ಮ್, ಹಳೇ ಹಂಚಿನ ಮನೆ ಇದ್ದ ರೈಲ್ವೆ ನಿಲ್ದಾಣದ ಕೌಂಟರ್, RCC ಕಟ್ಟಡವಾಗಿತ್ತು. ಬೆಳಕೇ ಇಲ್ಲದ ಪಾಳು ಬಿದ್ದ ಹಾಗೆ ಇದ್ದದ್ದು, ಜಗಮಗ ಅಂತ ಹೊಳೆಯುತ್ತಿತ್ತು. ಅಲ್ಲೇ ಇದ್ದ ಒಬ್ಬ ಮೋದಿ ಸರ್ಕಾರವನ್ನು ನೆನೆದು ಮಾತಾಡುತ್ತಾ ಹೋರಾಟ.

ಮನೆ ತಲುಪಿ, ಮತ್ತೆ ಮಲಗಿ ಎದ್ದು. ತಿಂಡಿಗೆ ತಯಾರಾದೆ. ಚಪಾತಿಗೆ ಬೆಲ್ಲ ಹಾಕಿ ಮಾಡಿದ ಮಾವಿನ ಸೀಕರಣೆ, ಗಸಗಸೆ ಪಾಯಸ ತಯಾರಾದದ್ದನ್ನು ನೋಡಿ, ಫುಲ್ ಕುಶ್. ಮಗ ಬಂದಾಗ ಹಬ್ಬ ಮಾಡು ಅನ್ನೋ ಮನಸ್ತಿತಿ ಈಗ ಸುಮಾರು ಮನೆಗಳಲ್ಲಿ ಬಂದಿದೆ.

ತಿಂಡಿ ತಿನ್ನುವಾಗ, ಟಿವಿ ಹಾಕಿ ಚಾನಲ್ ಬದಲಿಸುತ್ತಾ ಹೊರಟೆ. ಯಾವದೂ ಸಿಗದಿದ್ದಕ್ಕೆ ನ್ಯೂಸ್ ಹಾಕಿ ತಿನ್ನುತ್ತಾ ಕೂತೆ. ಮಂಡ್ಯ ರೈತರ ಆತ್ಮಹತ್ಯೆ ಬಗ್ಗೆ ಒಂದು ಕಾರ್ಯಕ್ರಮ ಬರ್ತಾ ಇತ್ತು.

ಕಬ್ಬು ಬೆಳೆದ ಕೆಲವು ರೈತರು, ಬೆಳೆದ ಕಬ್ಬು ತೆಗೆದುಕೊಂಡ ಕಾರ್ಖಾನೆಯವರು  ಹಣ ಕೊಡದದ್ದಕ್ಕೆ ಆತ್ಮಹತ್ಯೆ, ಮತ್ತೆ ಕೆಲವರು ಬೆಳೆ ಹಾನಿಯ ವಿಮೆ( Insurance ) ಬರದಿದ್ದಕ್ಕೆ ಆತ್ಮಹತ್ಯೆ.
ಇನ್ನೂ ಕೆಲವರು ಸಾಲ ಮಾಡಿ ಬೆಳೆದ ಕಬ್ಬನ್ನು ಕರೀದಿಸಲು ನಿರಾಕರಿಸುತ್ತಿರುವ ಕಾರ್ಖಾನೆ ನೋಡಿ ಅಸಹಾಯಕತೆ ಇಂದ ಆತ್ಮಹತ್ಯೆ. ಹೀಗೆ ಹಲವಾರು ಕಾರಣಕ್ಕೆ. ಒಟ್ಟಿನಲ್ಲಿ ಮನ ಕಲಕುವ ಕಾರ್ಯಕ್ರಮ.

ಹಾಗೆ ತಿನ್ನುತ್ತಿದ್ದ ಸಿಹಿ ಕಡೆ ಗಮನ ಹರಿಯಿತು. ಪ್ರತಿಯೊಬ್ಬರೂ ತಿನ್ನಲು ಸಿಹಿ ಒದಗಿಸಿದ ರೈತನಿಗೆ ಸಿಕ್ಕಿದ್ದು ವಿಷ. ತಿನ್ನಲು ಮುಜುಗರ ಅನಿಸಿತು. ಮತ್ತದೇ, ಆಷಾಡ ಮಾಸದಲ್ಲೂ ಸಿಹಿ ತಿನ್ನುವಂತೆ ಮಾಡಿದ ರೈತನಿಗೆ ನೇಣಿನ ಕುಣಿಕೆ.
ಆಶ್ಚರ್ಯದ ಸಂಗತಿ ಏನು ಅಂದರೆ, ಇಸ್ಟೆಲ್ಲಾ ಆದರೂ, ಇದೇ ಜಾಗಕ್ಕೆ ಸೇರಿದ ಮಾನ್ಯ ಸಿದ್ದರಾಮಯ್ಯ ನೋರು ಗಾಢ ನಿದ್ದೆಯಲ್ಲಿರುವುದು, ಮಂಡ್ಯದ ಗಂಡು ಅಂತ ಪದೇ ಪದೇ ಗಂಡು ಗಂಡು ಅಂತ ಹೇಳ್ತಿರೋರು ಎಲ್ಲಿ ಹೋದ್ರು.
ಒಂದು ದಿನ ಸoಬಳ ಬರೋದು ತಡವಾದರೆ ಅಥವಾ ಮಾರ್ಚ್ ನಲ್ಲಿ ಬಾರೋ ಬೋನಸ್ ಏಪ್ರಿಲ್ ನಲ್ಲಿ ಬಂದರೇ ಹಾರಾಡುವ ಹಕ್ಕು ನಮಗಿದೆ ಎಂದಾದರೆ, ರೈತರಿಗೆ ಯಾಕಿಲ್ಲ ಈ ಸವಲತ್ತು, ಅವರೇಕೆ ಮಾರಿದ ಹಣಕ್ಕ ವರ್ಷಗಟ್ಟಲೆ ಕಾಯಬೇಕು.
ಅವನೇಕೆ ಬೇರೆಯವರಿಗೆ ಸಿಹಿ ತಿನ್ನಿಸಿ ತಾನು ವಿಷ ಕುಡಿಯಬೇಕು.

ಸಿಹಿ ತಿನ್ನುವಾಗ ಒಮ್ಮೆ ಬೆಳೆದ ರೈತನನ್ನು ನೆನೆಸಿಕೊಳ್ಳಿ ಮಾನ್ಯ ಮಂತ್ರಿಗಳೇ, ನೀವು ತಿನ್ನುವ ಪದಾರ್ಥ ಕ್ರೌರ್ಯ ಅನಿಸಲಿಲ್ಲ ಎಂದಾದರೆ ಮನುಷ್ಯತ್ವ ಸತ್ತಿದೆ ಎಂದರ್ಥ. ದಯವಿಟ್ಟು ಎಲ್ಲರೂ ಮಾಡುವಂತೆ ಚಾನೆಲ್ ಬದಲಿಸಿ ತಿನ್ನಬೇಡಿ.

ಇದೆಲ್ಲವನ್ನೂ ನೋಡಿ, ನೋಡಿ ಸಾಕಾಗಿ ಬೆಳೆಯುವುದನ್ನು ನಿಲ್ಲಿಸಿ, ಪಟ್ಟಣಕ್ಕೆ ಒಲಸೆ ಹೋಗೋ ಮುಂದಿನ ಪೀಳಿಗೆ ಸೃಷ್ಟಿಯಾಗುತ್ತಿದೆ. ಆ ಕರಾಳ ದಿನ ಬರದಂತೆ ಎಚ್ಚರ ವಹಿಸದಿದ್ದಲ್ಲಿ ನಮ್ಮ ನಾಶಕ್ಕೆ ನಾವೇ ತಯಾರಾದಂತೆ.

-ಹರೀಶ್

ಭಾನುವಾರ, ಫೆಬ್ರವರಿ 1, 2015

ದೃಷ್ಟಿಕೋನ(ಣ) -

ಡಿಸೆoಬರ್ ತಿಂಗಳ ಕೊನೆ ಎಂದರೆ ಸಾಫ್ಟ್ವೇರ್ ಉದ್ಯೋಗಿಗಳಿಗೆ ಒಂದು ತರಹದ ಸಂತೋಷ, ಹೆಚ್ಚು ಕೆಲಸವಿಲ್ಲ ಅದರ ಮೇಲೆ ರಜೆಗಳು ಹಾಕುವ ಯೋಗ.
ಕ್ರಿಸ್ಮಸ್ ಎಂದರೆ ಏನೆಂದೂ ತಿಳಿಯದವರೆಲ್ಲ ಸಂಭ್ರಮಾಚರಣೆ ಮಾಡುವುದು, ಹೊಸ ವರ್ಷದ ಬರುವಿಕೆಗೆ ಕಾಯುವುದು, ಇಡೀ ಕಂಪನಿಯನ್ನು ಬಾಡದ ಹೂಗಳಿಂದ ಅಲಂಕರಿಸುವುದು,
ಅಶೋಕ ಮರಗಳ ತರಹದ ಗಾಳಿಬೀಸದ ಮರಗಳಿಗೆ ಅಲಂಕಾರ ಮಾಡಿ ಫೋಟೋ ತೆಗಿಸಿಕೊಂಡು, ಇನ್ನೂ ಹುಟ್ಟಲು ಸಮಯವಿರುವ ಶಿಶುವನ್ನು ಸಿಜರಿಯನ್ ಮಾಡಿ ತೆಗೆದು, ಹ್ಯಾಪಿ ಕ್ರಿಸ್ಮಸ್ ಹೇಳಿ ಪಾರ್ಟಿ ಮಾಡುವುದು.

ಮೇಲಿನ ಯಾವ ಆಚರಣೆಯನ್ನೂ, ಹಿಂದೆoದೂ ನೋಡಿ ಮಾಡಿ ಅಭ್ಯಾಸವಿಲ್ಲದ ನನಗೆ ಏನೋ ಹೊಸ ಅನುಭವ. ಎಷ್ಟೋ ಜಯಂತಿಗಳನ್ನು ಮಾಡುವ ನಾವು, ಇದೂ ಒಂದುತರ ಕ್ರಿಸ್ತ ಜಯಂತಿ ಅಂತ ಆಚರಣೆ ಮಾಡಿ ಮಜ ಮಾಡಿದೆವು.

ಹೀಗೆ  ನಾನು ಕೂಡ ಕ್ರಿಸ್ತ ಹುಟ್ಟುವ ೬ ದಿನ ಮುಂಚೆಯೇ ಎಲ್ಲ ಆಚರಣೆ ಮುಗಿಸಿ ಒಂದು ವಾರ ರಜೆ ಹಾಕಿ ಊರಿಗೆ ಹೊರಟೆ.
ಬೆಳಗ್ಗೆ ೫ ಗಂಟೆಗೆ ಊರು ತಲುಪಿದೆ, ಕೊರೆಯುವ ಚಳಿ, ನಿಶ್ಶಬ್ದವಾಗಿದ್ದ ತೋಟ, ಹಬ್ಬಕ್ಕೆ ಬಾ ಎಂದರೆ ಬರದೆ, ಹಬ್ಬಗಳೇ ಇಲ್ಲದ ಪುಷ್ಯಮಾಸದಲ್ಲಿ ವಾರಗಟ್ಟಲೆ ಬರುತ್ತಿರುವ ನನ್ನನ್ನು ನೋಡಿ ನಗುತ್ತಿರುವಂತೆ ಅನಿಸಿತು,
ಮಗ ಬಂದಾಗ ಹಬ್ಬ ಮಾಡುವ ಎನ್ನೋ ಮನಸ್ತಿತಿ ರೂಡಿ ಮಾಡಿಕೊಂಡಿದ್ದಾರೆ ಅಂತ ಅನ್ನಿಸಿ ಮನೆ ಕಡೆ ಹೊರಟೆ, ಹಾಗಂತ ಕ್ರಿಸ್ಮಸ್ ಮಾಡ್ತೀವಿ ಅಂತ ಅಲ್ಲ!

ಮನೆಯಲ್ಲಿ ಎರಡು ದಿನ ಕಳೆದು, ಅಜ್ಜಿ ಊರಿಗೆ ಹೋಗೋಣ ಅಂತ ಅನಿಸಿ, ಚಿಕ್ಕಮಗಳೂರಿನ ಬಳಿಯಿರುವ ಸಖರಾಯಪಟ್ಟಣಕ್ಕೆ ಹೊರಟೆ.
ಹೊಳಲ್ಕೆರೆಯಿಂದ ಸಖರಾಯಪಟ್ಟನಕ್ಕೆ ಕಡೂರು ಮಾರ್ಗವಾಗಿ ರೈಲಿನಲ್ಲಿ ಹೋಗುವುದು ಎಂದು ನಿಶ್ಚಯಿಸಿ,
ಎಲ್ಲ ತಯಾರಿ ಮಾಡಿಕೊಂಡು, ಸಮಯಕ್ಕೆ ಸರಿಯಾಗಿ ನಿಲ್ದಾಣ ತಲುಪಿ, ರೈಲಿನಲ್ಲಿ ಕುಳಿತೆ.
ಅದು ಯಾಕೋ ಗೊತ್ತಿಲ್ಲ, ರೈಲಿನಲ್ಲಿ ನಾನು ಹತ್ತಿದ ಬೋಗಿಯಲ್ಲಿ ಜಾಸ್ತಿ ಜನ ಇರಲಿಲ್ಲ.

ಒಬ್ಬ ವಯಸ್ಸಾದ ಮದುಕ ಹೊಸದುರ್ಗದಲ್ಲಿ ಹತ್ತಿದ, ಕೈಯಲ್ಲಿ ಒಂದು, ಕೊಂಕಳಲ್ಲಿ ಮತ್ತೊಂದು ಅಂತ ಎರಡು ಬ್ಯಾಗ್ ಹಿಡಿದಿದ್ದಾನೆ,
ಪ್ಯಾoಟು ಷರಟು ಧರಿಸಿದ್ದಾನೆ, ನೀಟಾಗಿ, ಇರುವ ಕೂದಲಿಗೆ ಎಣ್ಣೆ ಹಚ್ಚಿ, ಚೊಕ್ಕವಾಗಿ ಬಾಚಿದ್ದಾನೆ, ಒಟ್ಟಿನಲ್ಲಿ, ದೇಹಕ್ಕೆ ವಯಸ್ಸಾಗಿದ್ದರೂ ಜೀವನೋತ್ಸಾಹ ಬತ್ತಿಲ್ಲ ಅನ್ನುವ ತರಹ ತೋರುತ್ತಿದ್ದ ಅವರು, ನೇರವಾಗಿ ಬಂದು ನನ್ನ ಎದುರು ಸೀಟಿನಲ್ಲಿ ಕುಳಿತರು.

ನಾನು ಅಷ್ಟೇನು ಗಮನಿಸದೆ ನನ್ನ ಪಾಡಿಗೆ ಒಂದು ಕಾದಂಬರಿ ಹಿಡಿದು ಕುಳಿತಿದ್ದೆ.
ಆತ ಆಕಡೆ ಈಕಡೆ ನೋಡಿ ಒಂದು ತರಹ ಭಯದಿಂದ, ನನ್ನನ್ನು ಮಾತನಾಡಿಸಬೇಕೆಂದು, ಸರ್ ಅಂದರು.
ನಾನು ಕತ್ತೆತ್ತಿ ಏನು ಎಂದೆ.
ಇದು ಅರಸಿಕೆರೆಗೆ ಹೋಗತ್ತದೆ ಅಲ್ವ ಅಂದರು.
ಹಾ ಹೋಗುತ್ತದೆ.
ಯಾಕೋ ರೈಲಿನಲ್ಲಿ ಜನ ತುಂಬಾ ಕಡಿಮೆ ಇದಾರಲ್ವ ಎಂದರು.
ಒಳ್ಳೆಯದಾಯಿತು ಬಿಡಿ ಯಜಮಾನರೆ, ನಿಮ್ಮ ವೃದ್ದಾಪ್ಯದ ಹಕ್ಕು ಚಲಾಯಿಸದೆ ಸೀಟು ಸಿಕ್ತಲ ಎಂದೆ.
ಅದಕ್ಕೆ ನಕ್ಕು, ಅಲ್ಲ ಸರ್ ಇಷ್ಟು ಕಮ್ಮಿ ಜನ ಇದ್ದಾರೆ.. ಭಯ.. ಅಷ್ಟೆ ಎಂದು ಅನುಮಾನದ ರೀತಿಯಲ್ಲಿ ಉತ್ತರಿಸಿದರು.
ಏನು ಆಗಲ್ಲ ಸರ್, ಮುಂದೆ ಕಡೂರು ಬಳಿ ಹತ್ತುತಾರೆ. ಯಾಕೆ ಭಯ ಅಂತೀರ, ಆರಾಮಾಗಿ ಕೂಡಿ ಅಂತ ಏನೋ ದೊಡ್ಡ ಧೈರ್ಯ ಹೇಳುವವನಂತೆ ಹೇಳಿ ಹಾಗೇ ಹಿಡಿದಿದ್ದ ಪುಸ್ತಕದ ಕಡೆಗೆ ಹೊರಳಿದೆ.

ಹಾಗೇ ಮನಸ್ಸಿನಲ್ಲಿ ಆಲೋಚನೆಯ ಪದರ ತೆರೆಯಿತು, ಯಾಕೆ ಈ ವ್ಯಕ್ತಿಗೆ ಭಯ? ದುಡ್ಡಿಲ್ಲದವರಿಗೆ ಜೀವನದಲ್ಲಿ ಭಯ ಅಂತ ಕೇಲಿದ್ದೆ, ಆದರೆ ಈತ ನೋಡಲಿಕ್ಕೆ ಶ್ರೀಮಂತನ ತರಹ ಕಾಣುತ್ತಾನೆ, ಸಾಕಷ್ಟು ಹಣ ಇದೆ ಅನ್ಸತ್ತೆ. ಆದರೂ ಯಾಕೆ ಭಯ?
ವಯಸ್ಸಿದ್ದಾಗ ದುಡಿದಿದ್ದನ್ನು ಕಾಯುವ ಶಕ್ತಿ ಇಲ್ಲದ್ದಕ್ಕೆ ಭಯವೇ? ಅಥವಾ ವಯಸ್ಸಾದರೂ ಹಣದ ವ್ಯಾಮೋಹ ಬತ್ತದ್ದಕ್ಕೆ ಭಯವೇ? ಕುತೂಹಲದ ಕಟ್ಟೆ ಒಡೆದು, ಸರ್ ಯಾಕೆ ಭಯ ಎಂದೆ?
ಏನಿಲ್ಲ ಸರ್, ಜನ ಇಲ್ಲವಲ್ಲ, ಯಾರಾದ್ರು ಬಂದು ಬೆದರಿಸಿ ಲಗೇಜು ಕದ್ದಾರು ಅಂತ ಅಷ್ಟೆ.
ಒಹ್ ಹಾಗಾ ಏನು ಭಯ ಬೇಡಿ ಮುಂದೆ ಜನ ಹತ್ತುತಾರೆ ಎಂದೆ, ಸರಿ ಏನು ಅರಸೀಕೆರೆಗೆ ಹೋಗ್ತಾಯಿರೋದು ಎಂದೆ.
ಏನಿಲ್ಲ ಅಲ್ಲಿ ಮಗನ ಮನೆಗೆ ಹೋಗ್ತಿದ್ದೀನಿ ಎಂದರು. ಹಾಗೇ ಮಾತು ಮುಂದುವರೆದು ನನ್ನ ಪರಿಚಯವೂ ಆದಮೇಲೆ,
ಆತ ತನ್ನ ಜೀವನ ವೃತ್ತಾಂತ ಶುರು ಮಾಡಿದ. ಮಗನಿಗೆ ಮನೆ ಕಟ್ಟಿಸುತ್ತಿದ್ದಾರಂತೆ, ಮಗಳಿಗೆ ಒಂದು ಸೈಟ್ ತೆಗೆದು ಕೊಂಡಿದ್ದಾರಂತೆ ಅಲ್ಲೂ ಮನೆ ಕಟ್ಟಿಸಬೇಕಂತೆ.., ಕೊನೆಗೆ ಹೇಳಿದ, ಆತ PWD ಲಿ ಸೇ(ಶೇ)ವೆ ಸಲ್ಲಿಸಿದ್ದೀನಿ ಅಂತ.

ಇಷ್ಟು ವಯಸ್ಸಿನಲ್ಲೂ ಇಷ್ಟು ಆಸೆ ಹೊತ್ತ ಆ ವ್ಯಕ್ತಿ ನೋಡಿ.

ಅಂಗಗಳೆಲ್ಲವು ಶಕ್ತಿ ವಿಹೀನವು,
ಒಂದೂ ಹಲ್ಲೂ ಬಾಯೋಳಗಿಲ್ಲ,
ದಂಡದ ಬಲದಿ ನಡೆಯುವ ವೃದ್ಧನು,
ಆಶಾ ಪಿಂಡವ ಬಿಡಲಾರ. ಅಂತ ಯಾವಾಗಲೋ ಓದಿದ್ದು ಮನಸ್ಸಿಗೆ ಬಂದು ನಗು ಬಂತು.

ಇದೇನು ಜೀವನೋತ್ಸಾಹವೋ? ಅಥವಾ ಆಸೆಯೋ? ಅಥವಾ ಮಕ್ಕಳ ಮೇಲಿನ ಅತೀ ವ್ಯಾಮೋಹವೋ? ತಿಳಿಯಲಿಲ್ಲ.

ಹಾಗೆ ಮಾತನಾಡುತ್ತಾ ಮಾತನಾಡುತ್ತಾ ಬೀರೂರು ಸಿಕ್ಕಿತು, ಅಲ್ಲಿ ನಮ್ಮ ಬೋಗಿಗೆ ತುಂಬಾ ಜನ ಹತ್ತಿದರು, ಆಗ ಓ ತುಂಬ ಜನ ಬಂದರಲ್ಲ, ಮುದುಕನಿಗೆ ಧೈರ್ಯ ಬಂದಿರಬೇಕೆಂದು ಆತನನ್ನು ಕೇಳಿದೆ,
ಏನ್ ಸರ್, ನೋಡಿ ತುಂಬಾ ಜನ, ಈಗಲಾದರೂ ಆರಾಮಾಗಿ ಕೂತ್ಕೊಳಿ ಎಂದೆ.
ಆತ ಭಯದ ರೀತಿಯಲ್ಲಿ, ಹೆ ಏನಪ್ಪ!, ಇಷ್ಟೊಂದು ಜನ ಹತ್ತಿದರು, ಈ ನೂಕು ನುಗ್ಗಲಲ್ಲಿ ಯಾರಾದರು ಗೊತ್ತಾಗದಂತೆ ಲಪಟಾಯಿಸಿ ಬಿಟ್ಟರೆ ಎಂದರು.

ದೇವರೇ ನೀನೇ ಇವರನ್ನು ಕಾಪಾಡಬೇಕು ಅಂತ ಅನಿಸಿ,  ಏನು ಭಯ ಬೇಡ ಸರ್, ಆರಾಮಾಗಿ ಕೂತ್ಕೊಳಿ ನನ್ನ ಸ್ಟಾಪ್ ಬಂತು ನಾನು ಇಳೀತೀನಿ ಅಂತ ಕಡೂರು ರೈಲ್ವೆ ನಿಲ್ದಾಣದಲ್ಲಿ ಇಳಿದೆ.

ಈತ ಎಲ್ಲಾ ದೃಷ್ಟಿಕೋನದಿಂದಲೂ ಜನರನ್ನ ಕಳ್ಳರoತೆಯೇ ನೋಡುತ್ತಾನಲ್ಲ ಅಂತ ಅನಿಸಿ ಅವನ ಪರಿಸ್ಥಿತಿ ನೆನೆದು ನಗು ಬಂತು.
ಪಾಪ, ಜಗತ್ತನ್ನು ತನ್ನoತೆಯೇ ಕಾಣು ಎನ್ನುವುದನ್ನು ದೃಢವಾಗಿ ನಂಬಿದಂತಿದೆ ಮುದುಕ!!!


-ಹರೀಶ್


 

ಭಾನುವಾರ, ಅಕ್ಟೋಬರ್ 26, 2014

ಚಲನೆಯೇ ಚೇತನದ ಚಿಹ್ನೆ-


ಇಂದು ಭಾನುವಾರ, ಬೆಂಗಳೂರಿಗರಿಗೆ ಮಳೆಯಿಂದ ಅಕ್ಷರಷಃ ಭಾನು ಇಲ್ಲದ ವಾರ. ಇಂತಹ ಸುಮದುರ ಸಮಯದಲ್ಲಿ ಹಾಗೇ ಕುವೆಂಪು ಬರೆದ ಒಂದು ಪುಸ್ತಕ ಹಿಡಿದಿದ್ದೆ. ಓದುತ್ತಾ ಓದುತ್ತಾ ಕೆಲವು ಸಾಲುಗಳು ತುಂಬಾ ಇಷ್ಟವಾದವು.

"ಹೇಳಿದೊಡನೆ ನಂಬಬಹುದಾದದ್ದು ಶ್ರುತಿ, ಹೇಳಿದ್ದು ಸಕಾರಣವಾಗಿದ್ದರೆ ಮಾತ್ರ ನಂಬುವುದು ಮತಿ, ಹೇಳಿದ್ದನ್ನು ಸ್ವಂತ ಅನುಭವಕ್ಕೆ ತಂದುಕೊಂಡ ಮೇಲೆ ನಂಬುವುದು ಅನುಭೂತಿ."

ಮತ್ತೆ ಮತ್ತೆ ಕುತೂಹಲ ಕೆರಳಿಸಿ ಓದಿಸಿದ ಸಾಲುಗಳು.

ಸಂಜೆತನಕ ಓದಿ, ಸ್ವಲ್ಪ ಸಮಯ ಹೊರಗೆ ಹೋಗೋಣವೆಂದೆನಿಸಿ, ಪುಸ್ತಕ ಮುಚ್ಚಿಟ್ಟು, ಓದಿದ್ದನ್ನು ಮೆಲುಕು ಹಾಕುತ್ತಾ ಒಂದು ದೇವಸ್ಥಾನದೆಡೆಗೆ ನಡೆದೆ.
ಅದು ಗಿರಿನಗರದಲ್ಲಿರುವ ಆoಜನೇಯನ ಗುಡಿ. ದೇವಸ್ಥಾನದ ಒಳಗಡೆ ನಡೆದೆ. ಹಾಗೇ ಒಂದು ನಿಮಿಷ ನಿಂತಾಕ್ಷಣ ತಲೆ ತಿರುಗಿತು.
ಅಬ್ಬಾ! ಅದೆಷ್ಟು ಜನ, ಎಲ್ಲರೂ ಓಟಕ್ಕೆ ಬಿಟ್ಟವರಂತೆ ತಮ್ಮ ಶಕ್ತಿಮೀರಿದಷ್ಟು ಜೋರಾಗಿ ಹನುಮಪ್ಪನನ್ನು ಸುತ್ತುತ್ತಿದ್ದಾರೆ, ಒಬ್ಬರನ್ನು ಒಬ್ಬರು ತಳ್ಳುತ್ತಾ, ಮುಂದಿನವನು ಸ್ವಲ್ಪ ನಿಧಾನವಾದರೆ ಅವನನ್ನು ಹಿಂದಿಕ್ಕಲು ಮುಂದೆ ಸಾಗುತ್ತಾ ಗಿರ ಗಿರನೆ ತಿರುಗುತ್ತಿದ್ದಾರೆ.
ಕೆಲವರು ತಮ್ಮ ಅಭೀಷ್ಟ ಸಿದ್ಧಿಗಾಗಿ ತೆಂಗಿನಕಾಯಿ ಕಟ್ಟುತ್ತಿದ್ದಾರೆ, ಮತ್ತೆ ಕೆಲವರು ಕೈ ಮುಗಿದು ಭಗವಂತನನ್ನು ಕಾಯುತ್ತಿರುವರೇನೋ ಎನ್ನುವಂತೆ ಓಟಕ್ಕೆ ತಯಾರಾಗಿ ಅರ್ಚಕನ ಸಿಗ್ನಲ್ಗೆ ಕಾಯುತ್ತಾ ಕುಳಿತಿದ್ದಾರೆ.
ರೈಲ್ವೇ ನಿಲ್ದಾಣದಂತೆ ತೋರುತ್ತಿದ್ದ ಆ ಜಾಗದಲ್ಲಿ ಓಡುತ್ತಿದ್ದ ಒಬ್ಬ ಮಹಾಶಯನನ್ನು ನಿಲ್ಲಿಸಿ, ಯಾಕಪ್ಪಾ ರಾಜ ಈತರ ಓಡ್ತಾ ಇದ್ದೀಯ ಎಂದೆ. ಅದಕ್ಕೆ ಅವನು, ಅಯ್ನೋರು 41 ಸುತ್ತು ಹೊಡಿಯಾಕ್ ಹೇಳಿದರೆ ಅದೇನ್
ಬೇಗ ಮುಗಿಯುತ್ತಾ, ಮುಗೀದಲೆ ಹೋಗಂಗಿಲ್ಲ ಅದಕ್ಕೇ ಅಂದ.

ಸರಿ ನೀನಿನ್ನು ಓಡಪ್ಪಾ ಅಂತ ಹೇಳಿ, signal light ಇಲ್ಲದ traffic ನಲ್ಲಿ ರಸ್ತೆ ದಾಟುವ ಪರದಾಟದ ಪಾದಾಚಾರಿಯಂತೆ ನುಗ್ಗಿ, ಹನುಮಪ್ಪನ ಮುಂದೆ ನಿಂತೆ.
ನೋಡಿದಾಕ್ಷಣ ಕಣ್ಣು ತುಂಬುವಂತಹ ಕೈ ಮುಗಿದು ರಾಮನನ್ನು ನೆನೆಯುತ್ತಿರುವ ಪುಟ್ಟ ಮೂರ್ತಿಯನ್ನು
ಅರ್ಚಕರು ನಿಂಬೆಹಣ್ಣಿನ ಹಾರ ಹಾಕಿ, ತಿರುಗ್ಬೇಡ್ರೋ ತಲೆ ಸುತ್ತುತಾ ಇದೆ ಅಂತ ಕೈ ಮುಗಿದು ಕಣ್ಣು ಮುಚ್ಚಿರುವಂತೆ ಮಾಡಿದ್ದಾರೆ.

ಯಾಕೀಗತಿ ನಿನಗೆ ಎಂದು ಅನಿಸಿ ಒಂದು ನಮಸ್ಕಾರ ಮಾಡಿ ಹೊರಟೆ. ಬರುವಾಗ ಅನಿಸಿತು.

ಪೂಜಾರಿಯ 41 ಪ್ರದಕ್ಷಿಣೆಯನ್ನು ಶ್ರುತಿ ಎಂದು ನಂಬಿ, ತಮ್ಮ ಆಸೆಗೋಸ್ಕರ ಅದನ್ನು ಮತಿಯಾಗಿಸಿಕೊಂಡು. ಅನುಭೂತಿಯಾಗಲಿ ಎಂದು ಬಯಸುತ್ತಾರಾ ಜನ?

-ಹರೀಶ್

ಶನಿವಾರ, ಅಕ್ಟೋಬರ್ 18, 2014

ಸoಭಾಷಣೆ

ತಂದೆ ಮಗಳ ಸಂಭಾಷಣೆಯ ಒಂದು ತುಣಕು.

ತಂದೆ    : ಮಗು, ನಿನಗೆ ಎಂತಹ ಗಂಡನ್ನು ಹುಡುಕಲಿ.

ಜಾಹ್ನವಿ : ಯಾಕಪ್ಪ? ಇದ್ದಕ್ಕಿದ್ದಹಾಗೆ ಈ ಮಾತು.

ತಂದೆ    : ಹಾಗೆ ಒಂದು ತೀಕ್ಷ್ಣ ಚರ್ಚೆ ಮಾಡೋಣ ಅಂತ ಮನಸ್ಸಾಗಿದೆ. ನಿನ್ನ ಮಾತುಗಾರಿಕೆಯ ಮಜಲನ್ನು ನೋಡೂ ಆಸೆ.

ಜಾಹ್ನವಿ : ಹಾಗೋ! ಸರಿ ಅಣ್ಣ, ಹಾಗೆ ಆಗಲಿ, ನಾನು ವಿಷಯೋಚಿತವಾಗಿ ಮಾತನಾಡಿ ಬಹಳ ದಿನವಾಗಿದೆ.

ತಂದೆ    : ಮಗು ಒಂದು ಹೆಣ್ಣಿಗೆ ತನ್ನ ಗಂಡ ಸೂರ್ಯನಂತಿರಬೇಕೆoದು ಆಸೆ ಇರುತ್ತೋ ಅಥವಾ ಚಂದ್ರನಂತಿರಬೇಕೆoದೊ?

ಜಾಹ್ನವಿ : ಮೇಲ್ನೋಟಕ್ಕೆ ಸುಲಬದ ಪ್ರಶ್ನೆಯಾದರೂ ಅರ್ಥಗರ್ಭಿತವಾಗಿದೆ. ತಟ್ಟನೆ ಉತ್ತರಿಸಬೇಕೆಂದರೆ, ಸಾಮಾನ್ಯ ಒಂದು               ಹೆಣ್ಣು, ನನ್ನ ಗಂಡ  ತoಪಾದ ಮನಸ್ಸುಳ್ಳವನು, ಶಾoತ ಮೂರ್ತಿಯಾದ ಚಂದ್ರನಂತವನಾಗಿರಬೇಕು ಎಂದೇ         ಹೇಳುತ್ತಾಳೆ. ಆದರೆ ಚಂದ್ರ ಪರಾವಲಂಬಿ, ಬೇರೆಯರನ್ನು ಅವಲಂಬಿಸಿ ಬದುಕುತ್ತಿರುವ ಗಂಡನ್ನು ಯಾವ ಧೈರ್ಯದ ಮೇಲೆ   ಹೆಣ್ಣು ಮದುವೆಯಾದಾಳು? ಅದರ ಮೇಲೆ ಅವನು ಕಲೆಯುಳ್ಳ ಕುರೂಪಿ. ದಿನದಿನಕ್ಕೂ ಯಶಸ್ಸನ್ನು ಕಂಡು ಶುಕ್ಲಪಕ್ಷದ ತುದಿಯನ್ನು ಮುಟ್ಟಿರುವ ಗಂಡನ್ನು ಮದುವೆಯಾಗಿ ಆಮೇಲೆ ಕೃಷ್ಣ ಪಕ್ಷದಲ್ಲಿ ಜೀವನ ಸಾಗಿಸೋ ಕರ್ಮ ಹೆಣ್ಣಿಗೆ ಬಂದರೆ? ಅದರಲ್ಲೂ ರಾತ್ರಿಪಾಳೆ ಮಾಡೋ ಗಂಡು ಹೆಣ್ಣಿಗೆ ಎಷ್ಟು ಸಮಂಜಸ...
   
ತಂದೆ  : ಹಾಗಾದರೆ ಚಂದ್ರನನ್ನು ಇಷ್ಟು ಜರೆಯುವ ಹೆಣ್ಣು ಜಗತ್ಪ್ರಸಿಧ್ಧನಾದ, ಸ್ವಾವಲಂಭಿಯಾದ, ಸದಾ ಜಗಕ್ಕೋಸ್ಕರ ಸವೆಯುತ್ತಿರುವ ಸೂರ್ಯನಂತವನು ಇಷ್ಟವಾದಾನೆ?

ಜಾಹ್ನವಿ : ಖಂಡಿತಾ ಇಲ್ಲ. ಸದಾ ಜನರ ಸೇವೆಯಲ್ಲಿರುವ ಗಂಡು ಹೆಂಡತಿಗೆಲ್ಲಿ ಸಮಯ ಕೊಟ್ಟಾನು? ಸದಾ ಬೇರೆಯಾವರಿಗೋಸ್ಕರ ತನ್ನ ಒಡಲನ್ನು  ಬೆಂಕಿಯ ಉಂಡೆಯನ್ನಾಗಿಸಿಕೊoಡು ಪ್ರಕಾಶಮಾನವಾಗಿ ಧಗ ಧಗನೆ ಉರಿಯುತ್ತಿರುವವನ ಒಡಲಲ್ಲಿ ಹೆಣ್ಣಿನ ಅಸ್ತಿತ್ವಕ್ಕೆ ಬೆಲೆ ಎಲ್ಲಿ.

ತಂದೆ    : ಸದಾ ಹೆಣ್ಣಿನ ಸುತ್ತಲೇ ಸುತ್ತರಿಯುವ ಚಂದ್ರನoತವನೂ ಬೇಡ, ಹೆಣ್ಣನ್ನೇ ತನ್ನ ಸುತ್ತ ಸುತ್ತುವoತೆ  ಆಕರ್ಷಿತನಾದ ಭಾಸ್ಕರನಂತವನೂ ಬೇಡ ಅಂದರೆ, ಚಕ್ರವರ್ಥಿಯಾದ ಗಂಡ ಬೇಕು ಆದರೆ ಮನೆಯಲ್ಲಿರಬೇಕು ಅನ್ನೋ ಆಗದ ವಾದವೇ ನಿನ್ನದು?

ಜಾಹ್ನವಿ : ಹೆಣ್ಣು ಯಾವಾಗಲೂ ಸೂರ್ಯನಂತಹ...

ಅಮ್ಮ : ಎoತದು ಕಾಡು ಹರಟೆ ಅಪ್ಪ ಮಗಳದು, ಊಟಕ್ಕೆ ಬನ್ನಿ ಹೊತ್ತಾಯ್ತು.

ತಂದೆ : ಸರಿ ನಡಿ ಊಟ ಮಾಡೋಣ, ನಿನ್ನ ಮಾದುವೆಗೆ ಇನ್ನೂ ಸಮಯ ಇದೆ, ಆಗ ಯಾವ್ದಾದ್ರು ಗುರು ಗ್ರಹದ ಗಂಡು ಹುಡ್ಕೋಣ.



-ಹರೀಶ್

ಶನಿವಾರ, ಏಪ್ರಿಲ್ 26, 2014

ದೈವಭಕ್ತಿಗೊoದು ಪ್ರವಾಸ


ಮನೆಯಲ್ಲಿ ಎಲ್ಲರೂ ಧರ್ಮಸ್ಥಳಕ್ಕೆ ಹೋಗಲು ಸಿದ್ದತೆ ನಡೆಸಿದ್ದರು. ಶನಿವಾರ ಹೊರಟದ್ದರಿಂದ ನಾನೂ ಜೊತೆಗೆ ಹೊರಡಲು ಒಪ್ಪಿ ಹೊರಟೆ.ಮೊದಲು ಸುಬ್ರಹ್ಮಣ್ಯಕ್ಕೆ ಹೋಗಿ ಮಗನನ್ನು ನೋಡಿ ಆಮೇಲೆ ಅಪ್ಪನನ್ನು ನೋಡೂದು ಅಂತ ತೀರ್ಮಾನಕ್ಕೆ ಬಂದು ಬೆಂಗಳೂರಿನಿಂದ ಕಾರಿನಲ್ಲಿ ಹೊರಟೆವು. ಬೆಳಗ್ಗೆ ೫ ಗಂಟೆಗೆ ಬಿಟ್ಟದ್ದಕ್ಕೆ ಹಾಸನ,ಸಕಲೇಶಪುರ ಮಾರ್ಗವಾಗಿ ಶಿರಾಡಿ ಘಾಟಿ ಇಳಿದು ೯:೩೦ ಕ್ಕೆ ಸುಬ್ರಹ್ಮಣ್ಯ ತಲುಪಿದೆವು. 

ದರ್ಶನದ ಎಲ್ಲರೀತಿಯ ತಯಾರಿಯನ್ನು ಮುಗಿಸಿ ದೇವಸ್ಥಾನಕ್ಕೆ ಹೋದೆವು. ಅಬ್ಬಾಎಂತಹ ಜನ ಜಂಗುಳಿ!, ನೋಡುತ್ತಿದ್ದಂತೆ ಬೆವರಿದೆ. ಹಾಗೆ ಸರದಿ ಸಾಲಿನಲ್ಲಿ ನಿಂತು ಬೆವೆತು ಸುಸ್ತಾಗಿ ಭಗವಂತನ ಮೂರ್ತಿಯ ಮುಂದೆ ನಿಂತೆ. ಕೈ ಮುಗಿದು ಹೊರ ಬಂದೆ ಅಷ್ಟೆ. ಇಷ್ಟಕ್ಕೆ ಎಷ್ಟು ದೂರದ ಊರಿನಿಂದ ಬರುತ್ತಾರೆ ಜನ? ಭಗವಂತನ ಮಹಿಮೆ ಅಪಾರ ಅಂತ ನೆನೆಯುತ್ತಾ ಊಟ ಮುಗಿಸಿ ಧರ್ಮಸ್ಥಳಕ್ಕೆ ಹೊರಟೆವು. 

ಆ ಹೋಗುವ ದಾರಿಯೇ ದಕ್ಷಿಣ ಕನ್ನಡದ ಸೆಕೆಯನ್ನು ಸಾರುತ್ತಿತ್ತು. ಸಮುದ್ರರಾಜ ತನ್ನ ಬೃಹತ್ ಬಾಹುಗಳಿಂದ ಭಾಸ್ಕರನನ್ನು ಬೆಸೆಯುವೆ ಎಂಬ ಬಾಲಿಶವಾದ ಭ್ರಮೆಯಿಂದ ಬೆವೆತು ಉಪ್ಪಾಗಿ ನಮ್ಮನ್ನೂ ಬೆವರಿನ ಮಡುವಿಗೆ ನೂಕಿದ್ದಾನೇನೋ ಎಂದು ಶಪಿಸುತ್ತಾ ಕಾರಿನ ಎಸಿ ಹಾಕಿ ಧರ್ಮಸ್ಥಳ ತಲುಪಿದೆವು.

ಎಲ್ಲಿ ನೋಡಿದರೂ ದೈವಭಕ್ತರು, ಎಲ್ಲೆಲ್ಲೂ ಭಗವಂತನ ನಾಮಸ್ಮರಣೆಯ ಹಾಡುಗಳು, ಪ್ರತಿ ಅಂಗಡಿಯಲ್ಲೂ ತೀರ್ಥ,ಪ್ರಸಾದ ಹಾಗೂ ಮಂಜುನಾಥನ ಚಿತ್ರಪಟ. ಆಸ್ತಿಕನಿಗೆ ಅಕ್ಷರಶಹ ಕೈಲಾಸಕ್ಕೆ ಬಂದ ಅನುಭವ. 
ಅದೇ ನಾಸ್ತಿಕನಿಗೆ,ಬರೀ ಜನ ಜಂಗುಳಿ, ಭಗವಂತನ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿರುವ ಮಳಿಗೆಗಳು, ಇನ್ನು ಅಲ್ಲಿನ ಹಾಡುಗಳು ಧ್ವನಿ ಮುದ್ರಣ ಮಾರಲು ಹಾಕಿರುವ ಜಾಹಿರಾತಿನಂತೆ.ಒಟ್ಟಿನಲ್ಲಿ ಮಂಜಿನಲ್ಲಿರಬೇಕಾದ ಮಂಜುನಾಥ ಬೆವರಿನ ಮಡುವಿನಲ್ಲಿ ಬಂದು ಬಿದ್ದoತೆ ತೋರುತ್ತಿತ್ತು.

ದರ್ಶನಕ್ಕೆಂದು ಸರದಿ ಸಾಲಿನಲ್ಲಿ ನಿಂತೆವು. ಕಿಲೋಮೀಟರ್ ಉದ್ದದ ಸಾಲು. ಬೆವೆತೂ ಬೆವೆತೂ ಸಾಕಾಗಿ ಈ ಮಂಜುನಾಥನಿಗೆ ಏನಾಯ್ತು ಇಂತಹ ಜಾಗದಲ್ಲಿ ಬರಲು, ಅವನ ಹೆಸರಿಗೆ ತದ್ವಿರುದ್ದವಾದ ಜಾಗ ಎನ್ನುತ್ತಾ ಆವರಣ ತಲುಪಿ ದರ್ಶನ ಪಡೆಯುವ ಹೊತ್ತಿಗೆ ಸ್ನಾನವಾದಂತಾಗಿತ್ತು. ಊಟ ಮುಗಿಸಿ ಮಲಗಿ ಬೆಳಗ್ಗೆ ಬೇಲೂರು ಹಳೇಬೀಡು ನೋಡಲು ಹೊರಟೆವು.

ಬೇಲೂರಿನ ಕೇಶವ ಹಾಗೂ ಹಳೇಬೀಡಿನ ಶಾoತಳೇಶ್ವರ ಎರಡೂ ಸುಂದರ ಮೂರ್ತಿಗಳು. ಇಲ್ಲಿಗೆ ಬಂದಾಗ ಒಂದು ಆಶ್ಚರ್ಯ ಕಾದಿತ್ತು. ಖಾಲಿ ಖಾಲಿಯಾದ ದೇವಸ್ಥಾನದ ಆವರಣಗಳು. ಎಷ್ಟು ಹೊತ್ತು ಬೇಕಾದರೂ ಭಗವಂತನ ಮುಂದೆ ನಿಂತು ಪ್ರಾರ್ಥಿಸಲು ಅವಕಾಶವಿರುವ ಪ್ರಶಾoತ ಸ್ಥಳ. ಅರೆ ಎರಡೂ ಭಗವಂತನಿರುವ ಜಾಗಗಳೆ, ಅಲ್ಲಿಗೂ ಇಲ್ಲಿಗೂ ಇಷ್ಟೋoದು ಬೇಧವೇಕೆ? ಹಾಗಾದರೆ ಭಕ್ತನ ಪ್ರಕಾರ ದೈವದ ಶಕ್ತಿ ಯಾವುದರ ಮೇಲೆ ಅವಲಂಬಿತ?. ಜನಜಂಗುಳಿಯ ಮೇಲೊ?  ಸ್ಥಳಪ್ರಭಾವದ ಮೇಲೊ? ಅಥವಾ ಸ್ಥಳದ ಬಲವಾದ ಕಥೆಯ ಮೇಲೊ?

  ಭಕ್ತರ ಬಯಕೆಯನ್ನು ಈಡೇರಿಸುವವನು ಈಶ್ವರನಾದಮೇಲೆ ಅವನ ಶಕ್ತಿಯನ್ನು ಒಂದೊಂದು ಮೂರ್ತಿಯಲ್ಲಿ ಒಂದೊಂದುತರಹ ಊಹೆ ಮಾಡಿದ್ದೇಕೆ? ಅರ್ಥವಾಗದ ಎಷ್ಟೋ ಪ್ರಶ್ನೆಗಳು ವ್ಯರ್ಥವಾದಂತೆ ಎಂದು ಭಾವಿಸಿ, ಹುಲು ಮಾನವರು ನಾವು ಎಂದೆನಣಿಸಿ ಕೈ ಮುಗಿದು ಹೊರಟೆ.

-ಹರೀಶ್

ಶನಿವಾರ, ಏಪ್ರಿಲ್ 19, 2014

ನಮ್ಮ ಕನ್ನಡಾಭಿಮಾನ


ಎಂದಿನಂತೆ ಕೆಲಸಕ್ಕೆ ಹೋಗುವ ಗಡಿಬಿಡಿಯಿಲ್ಲದೆ ನಿಧಾನವಾಗಿ ಎದ್ದು ದೈನಂದಿನ ಕಾರ್ಯಕ್ರಮದಲ್ಲಿ ಮುಳುಗಿ ಮುಗಿಸಿ ಹೊರಬಂದು ಕುರ್ಚಿ ಮೇಲೆ ಕುಳಿತೆ. ದಿನವೂ ಕೆಲಸದಲ್ಲಿ ಸಮಯ ಕಳೆಯುತ್ತಿದ್ದರಿಂದ ಪುರಸೊತ್ತು ಬೇಸರಕ್ಕೆ ತಿರುಗುವ ಮುನ್ಸೂಚನೆ ಮನಸ್ಸಿಗೆ ತೋರಿತು. ಅದರಿಂದ ಹೊರಬರಲು ಟಿವಿ ನೋಡುತ್ತ ಕುಳಿತೆ, ಅದೂ ಬೇಸರ ಬಂದು ಮತ್ತೆ ಮಲಗಿ ಮತ್ತೆ ಎದ್ದು ಸಂಜೆ ಹಾಗೆ ತಿರುಗಾಡಲು ಒಂದು ಪಾರ್ಕ್ ಕಡೆಗೆ ನಡೆದೆ.

ಉದ್ಯಾನನಗರಿ ಎಂದೇ ಪ್ರಸಿದ್ದಿಪಡೆದಿರುವ ಈ ನಮ್ಮ ಬೆಂಗಳೂರಿನಲ್ಲಿ ಪಾರ್ಕ್ ಗೆ ಏನೂ ಕೊರತೆ ಇಲ್ಲ. ಬೀದಿಗೆ ಒಂದು ಪಾರ್ಕ್. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಜಮಾಯಿಸಿದ್ದರು,  ಸುತ್ತಲೂ ಕಣ್ಣು ಹಾಯಿಸುತ್ತ ಮುಂದೆ ನಡೆದು ಒಂದು ಬೆಂಚ್ ಮೇಲೆ ಕುಳಿತೆ. ಹಾಗೆ ನನ್ನ ಪಕ್ಕದ ಬೆಂಚಿನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಕುಳಿತಿದ್ದರು. ಅವರ ಮಾತಿನ ನಡುವೆ ತಿಳಿದು ಬಂದ ಹಾಗೆ ಅವರ ಹೆಸರು ಪ್ರತಾಪ್ ಮತ್ತು ಮನೋಹರ್.
ಅವರ ಮಾತನ್ನು ಹಾಗೆ ಗಮನಿಸುತ್ತಾ ಕೂತೆ.

ಪ್ರತಾಪ್: ನಮ್  ಕಾಲೇಜ್ನಗೆ ಮ್ಯಾಡಂ ಇಂಗ್ಲಿಷಗ್ ಮಾತಾಡು ಅಂತ ಗಂಟ್ಬಿದ್ದಿದ್ರು. ನಾನ್ ಮಾತಾಡೋನೆ, ಬಲ್ನನ್ಮಗ ,ನಾವು ಅಣ್ಣಾವ್ರ ಫ್ಯಾನು, ಅಂಗೆಲ್ಲ ಬ್ಯಾರೆ ಬಾಸೆನಾಗೆ ಮಾತಾಡಕಿಲ್ಲ ಅಂತ ಬಚಾಯ್ಸ್ಕೊಂಡ್ ಬಿಟ್ಟೆ.

ಮನೋಹರ್: ಯಾಕೆ? ಇಂಗ್ಲಿಷ್ ನಲ್ಲಿ ಮಾತಾಡೊಕೆ ಏನ್ ಕಷ್ಟ. ನೋಡು ಸುಮ್ನೆ ಮ್ಯಾಮ್ ಹತ್ರ ಕೆಟ್ಟವ್ನಾದೆ.

ಪ್ರತಾಪ್: ಕಷ್ಟನ, ಯಾಕ್ ಕೇಳ್ತಿಯ, ನಮ್ಮಂತ ಕನ್ನಡ ಮೀಡಿಯಂ ನವ್ರ್ಗೆ ಬಲೇ ಕಷ್ಟ. ಮಗಾ ಇಲ್ಲಿ ಕೇಳು, ಇಂಗ್ಲಿಷಗೆ ಒಸಿ ಬರಿ ಅಂದ್ರೇನೆ ತಡ್ಬಡಾಯ್ಸಿ ಹೋಯ್ತಿನಿ ಅಂತದ್ರಗೆ ಮಾತಾಡದೆ ನಮ್ಗೆಲ್ಲ ಅಲ್ಲ ಕಣ್ ತೆಗಿಲ ಆ ಬಾಸೆ.

ಮನೋಹರ್: ಅಂದ್ರೆ, ನಿಂಗೆ ಇಂಗ್ಲೀಷ್ ಬರಲ್ಲ ಅಂತ ನೀನ್ ಕನ್ನಡದ ಕಂದ ಅಂತ ಹೇಳ್ಕೊಂಡ್ ತಿರುಗ್ತಿದಿಯಾ? ಅಥವಾ ನಿಜವಾಗ್ಲು ಕನ್ನಡ ಅಂದ್ರೆ ಇಷ್ಟನ? ನಾನ್ ಯಾಕೆ ಈ ಮಾತು ಕೇಳ್ತಿದೀನಿ ಅಂದ್ರೆ ನಾನು ಹುಟ್ಟಿದಾಗಿನಿಂದ ಇದೇ ಊರಲ್ಲಿದಿನಿ. ಇಲ್ಲಿ ಇಂಗ್ಲೀಷ್ ಬಂದವ್ರು ಕನ್ನಡನ ಬಳಸಲ್ಲ, ಮಕ್ಳಿಗೆ ಕಲಿಸೋಲ್ಲ.  ಸಂಪೂರ್ಣ ಬರ್ದವ್ರು, ಇಂಗ್ಲೀಷ್ ಕಲಿಬೇಕು ಅಂತ ಕನ್ನಡನ ಬಯ್ಕೊಂಡು ತಿರುಗ್ತಿರ್ತರೆ. ಇಂತವರಿಗೆ ಕನ್ನಡ ಕಾದಂಬರಿ ಓದ್ಬೇಕು ಅಂತ ಅನ್ನುಸ್ದಾಗ ಇಂಗ್ಲೀಷ್ ಕಲಿಯೋ ಮನಸ್ಸು ಬರತ್ತೆ, ಇಂಗ್ಲೀಷ್ ಪುಸ್ತಕ ಹಿಡ್ಕೊಂಡಾಗ ಅದು ಓದಲು ಆಗದೆ ಕನ್ನಡ ಅಭಿಮಾನ ಉಕ್ಕತ್ತೆ. ಒಟ್ನಲ್ಲಿ ಅದು ಇಲ್ದೆ ಇದು ಇಲ್ದೆ ಒದ್ದಾಡ್ತರೆ.

ಪ್ರತಾಪ್: ಏನೊ ಒಂತರ ನಾನು ಅದೇಯ. ಸರಿ ಬಾ ಹೋಗಣ ಓದ್ಕಬೇಕು, ಕರೆಂಟ್ ಬಂದ್ಮೇಲ್ ತಾನೇ ಬಲ್ಬ್ ನ ಯೋಚ್ನೆ.

ಅವರಿಬ್ಬರೂ ಹೋರಟಮೇಲೆ ಹಾಗೇ ಅವರ ಮಾತನ್ನು ಯೋಚನೆ ಮಾಡುತ್ತಾ ಕುಳಿತೆ. ಎಷ್ಟು ಸತ್ಯ ಆ ಮಾತುಗಳು.
ಪರಭಾಷೆ ಕಲಿಯಲಾಗದೆ ನಮ್ಮ ಭಾಷೆ ತಿರಸ್ಕರಿಸುತ್ತಿರುವ ಗುಂಪು ಒಂದುಕಡೆಯಾದರೆ  ಪರಭಾಷೆಗೆ ಸಂಪೂರ್ಣ ತೊಡಗಿಸಿಕೊಂಡು ನಮ್ಮದನ್ನು ಮರೆಯುತ್ತಿರು ಗುಂಪು ಮತ್ತೊಂದು ಕಡೆ. ಹೀಗಾದರೆ ನಮ್ಮ ಭಾಷೆಗೆ ಉಳಿಗಾಲ?

ಪರಭಾಷೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಕನ್ನಡದಲ್ಲಿ MA ಮಾಡಿದ ಎಷ್ಟು ಜನರು ವ್ಯಾಕರಣಬದ್ದ ಕಾವ್ಯ ರಚನೆ ಮಾಡಬಲ್ಲರು, ಅದೂ ಹೋಗಲಿ ಸಣ್ಣದೊಂದು ಕಂದ ಪದ್ಯ ರಚಿಸಬಲ್ಲರು.
ಕನ್ನಡ ಕಾವ್ಯ ರಚನಾ ಕೌಶಲ್ಯವನ್ನು ಕಲಿಯುವ ಸಾಮರ್ಥ್ಯವಿದ್ದ ಕನ್ನಡದ ಕೂಸುಗಳು ಉದ್ಯೋಗಾವಕಾಶಕ್ಕಾಗಿ ಪರಭಾಷೆಯ ಪಾಲಾದವೇ?
ಹಾಗಾದರೆ, ಪರಭಾಷೆ ಕಲಿಯಲಾಗದೆ, ಬೇರೆ ವಿಧಿಯಿಲ್ಲದೆ, ಮಾತೃಭಾಷೆಗೆ ಕಟ್ಟುಬಿದ್ದ ಕನ್ನಡಾಂಬೆಯ ಕೃಷ ಕೂಸುಗಳೆ ಇನ್ನು ಮುಂದೆ ಕನ್ನಡ ಸಾಹಿತ್ಯದ ಚುಕ್ಕಾಣಿ ಹಿಡಿಯಲಿರುವುವು?

ಕನ್ನಡ ಹೋರಾಟದ ಗುರಿಯೇನು?ಯಾವುದು ಅದರ ಧ್ಯೇಯ?
ಸ್ವಲ್ಪ ಯೋಚಿಸಿ ಸ್ನೇಹಿತರೆ ಉತ್ತರ ಹೊಳೆದಲ್ಲಿ ತಪ್ಪದೆ ತಿಳಿಸಿ.

-ಹರೀಶ್