ಶನಿವಾರ, ಡಿಸೆಂಬರ್ 23, 2017

ರಾಮಾಶಾಸ್ತ್ರಿ - ಶಂಕರ ಶಾಸ್ತ್ರಿ

ಶಂಕ್ರು ಅದ್ಯಾಕ್ ಹಾಗ್ ಕೂತಿದಿಯೋ!  ಏಳು, ಸಂಜೆ ಐದ್ ಆಯ್ತು, ತಯಾರಾಗು ಒಂದ್ ರೌಂಡ್ ಸಮುದ್ರಬಳಿ ಹೋಗ್ ಬರೋಣ.

ವಾವ್ ನಡಿ ಅಜ್ಜ, ಪಟ್ ಅಂತ ರೆಡಿ ಆಗ್ತೀನಿ ಅಂತ ಧಡಕ್ಕನೆ ಎದ್ದು- ಒಂದು ಕಪ್ಪು ಚಡ್ಡಿ ಒಂದು ದೊಗಲೆ ಟೀಶರ್ಟು ಹಾಕಿ, ತಲೆಗೆ ಒಂದು ಟೋಪಿ ಹಾಕಿದ.

ತಡಿ ಬಂದೆ ಅಂತ ಒಂದು ಬಿಳೀ ಖಾದಿ ಅಂಗಿಯನ್ನು ತಲೆಮೇಲಿಂದ ಹಾಕ್ಕೊಂಡು, ಬಿಳೀ ಪಂಚೆ ಉಟ್ಟು ಎತ್ತುಕಟ್ಟಿದರು, ಕೊಬ್ಬರಿ ಎಣ್ಣೆ ಹಾಕಿದ್ದ ಕಪ್ಪು ಬಿಳಿ ಕೂದಲನ್ನು ಹಿಂದಕ್ಕೆ ಬಾಚಿ, ಹುಬ್ಬಿನ ಮಧ್ಯೆ ಕುಂಕುಮ ಒತ್ತಿ, ಕೋಲು ಹಿಡಿದು - ನಡೀ ಕೂಸೇ ಹೊರಡು!

ಹಾಗೇ!!, ಅಜ್ಜ ಬೇಸಿಗೆ ರಜೆಗೆ ಊರಿಗೆ ಬಂದ ಮೊಮ್ಮಗನ ಜೊತೆ ಹರಟುತ್ತಾ ಸಮುದ್ರದಂಡೆಗೆ ಬಂದು ಒಂದು ಬಂಡೆಯಮೇಲೆ ಕುಳಿತರು-

ಸುಮಾರು ಹೊತ್ತು ಅಲೆಗಳನ್ನೇ ದಿಟ್ಟಿಸುತಿದ್ದ ಶಂಕ್ರ...

ಈ ಅಲೆಗಳನ್ನ ನೋಡ್ತಿದ್ರೆ ಏನ್ ಅನ್ಸತ್ತೋ ಶಂಕ್ರು?

ಅಮ್ಮ ದಿನಾ ಮನೆಯಿಂದ ಆಫೀಸಿಗೆ - ಆಫೀಸಿಂದ ಮನೆಗೆ ಬಂದ್ ಹೋಗೋತರ!!

ಒಳ್ಳೆ ಭ್ರಮೆಗೇಡಿ ನೀನು ಎಂದು ನಗುತ್ತಾ ಪಕ್ಕಕ್ಕೆ ಸರಿದು, ತೋಳನ್ನು ಹಿಡಿದು, ಮುಂದಿನ ವರ್ಷ ಹೈಸ್ಕೂಲ್ ಹೋಗ್ತಿದಿಯ ಇನ್ನು ಅದೇ ಬುದ್ದಿ ಅಂತ ತಲೆಸವರಿದ್ರು.

ಮೊನ್ನೆ ಭಾನುವಾರ ಅಪ್ಪನೊಂದಿಗೆ ಬಾಲ್ಕಾನಿಲಿ ಕೂತು ಮಾತಾಡ್ತಿದ್ದೆ.
ಅಪ್ಪನನ್ನ ಕೇಳ್ದೆ, ಅಪ್ಪಾ, ಸ್ಕೂಲ್ ಮುಗಿದ್ಮೇಲೆ ನೀನ್ ಏನ್ ಮಾಡ್ತಿದ್ದೆ ಅಂತ?

ವಾವ್ ಅದೊಂದು ಅಧ್ಬುತ ಲೋಕ ಶಂಕ್ರು, ಶಾಲೆ ಬಿಟ್ ತಕ್ಷಣ ಮನೆಗ್ ಓಡಿ, ಕೈಕಾಲ್ ಮುಖ ತೊಳ್ಕಂಡ್, ಅಡಿಗೆಮನೆಲ್ ಇದ್ದ ಅಮ್ಮನ್ನ ಹೋಗಿ ಅಪ್ಕೊತಾ ಇದ್ದೆ,
ನಾ ಶಾಲೆಯಿಂದ ಬರೋಹೊತ್ತಿಗೆ ಅವ್ರೆಕಾಳ್ ಉಪ್ಪಿಟ್ಟೋ ಇಲ್ವಾ ಗೊಜ್ಜವಲಕ್ಕಿನೋ ಮಾಡಿ  ಇಟ್ಟಿರ್ತಿದ್ಲು, ಆಹಾ ಅಮ್ಮನ ಆ ಅವಲಕ್ಕಿಯ ರುಚಿಯೋ ರುಚಿ, ಅಷ್ಟೊತ್ತಿಗೆ ಅಪ್ಪನಿಗೆ ಯಾವ್ದೋ ಕಾಲ್ ಬಂದು ಮಾತು ನಿಂತೊಯ್ತು.

ಹೌದೂ! ಅಜ್ಜಿ ಕೆಲ್ಸಕ್ಕೆ ಹೋಗ್ತಿರ್ಲಿಲ್ವಾ ತಾತ?

ಹ ಹ ಇಲ್ಲ ಪುಟ್ಟಾ, ಶಾರದೆಗೆ ಮನೆಯೇ ಆಫೀಸು, ಒಂತರಾ ವರ್ಕ್ ಫಾರ್ ಹೋಂ. ಅವಳಿಗೆ ಮಗಾ ಅಂದ್ರೆ ಪ್ರಾಣ, ದಿನಾ ತರೆಹೇವಾರಿ ತಿಂಡಿ ಮಾಡಿ ತಿನ್ನುಸ್ತಿದ್ಲು, ನಿಂಗೊತ್ತಾ ಶಂಕ್ರು, ನಿಮ್ ಅಜ್ಜಿ ನಿಮ್ಮಪ್ಪ ಹೈಸ್ಕೂಲ್ ಓದ್ಬೇಕಾರು ಬೆಳಗ್ಗೆ ತಿಂಡಿ ತಾನೇ ತಿನ್ನುಸ್ತಿದ್ಲು. ನಿಮ್ಮ ಅಜ್ಜಿ ಶಾಲೆಗೇ ಹೋದವಳಲ್ಲ, ಆದ್ರೆ ಜೈಮಿನಿ ಕುಮಾರವ್ಯಾಸ ಭಾರತಗಳು ಕಂಠಪಾಠವಾಗಿತ್ತು, ಅದೇನು ಕಂಠ ಅಂತೀಯ,
ಗಮಕ ಹಾಡ್ತಾ ಕೂತ್ರೆ, ಸುತ್ತಲಿನೋರು ಪ್ರಪಂಚ ಮರೀತಿದ್ರು.

ಶಾರದೆ ರಾತ್ರಿಯ ಅಡಿಗೆ ಮಾಡುತ್ತಾ ಒಲೆಯಮುಂದೆ ಕೂತಿರುವಾಗ, ಅವಳ ತೊಡೆಮೇಲೆ ಮಲಗಿ, ಗಮಕ ಹೇಳಮ್ಮಾ ಅನ್ನುತ್ತಿದ್ದ ನಿನ್ನಪ್ಪ. ಅವನು ಕೇಳುವುದು ಹೆಚ್ಚೋ ನಾ ಹೇಳುವುದು ಹೆಚ್ಚೋ ಅನ್ನೋ ರೀತಿಲಿ, ಅವನ ತಲೆಕೂದಲು ಹಿಂದೆ ಮಾಡಿ ಹಣೆಗೆ ಒಂದು ಮುತ್ತಿಕ್ಕಿ, ತಲೆ ಸವರುತ್ತಾ ಹಾಡುತ್ತಿದ್ದಳು.
ಇದೇ ರೀತಿ ಮಲಗಿ ಕೇಳಾದಮೇಲೆ, ಒಂದುದಿನ ಎದ್ದು ಕೂತು ಕೇಳಿದ - ಅದೆಷ್ಟು ಸೋಗಸಾಗೆ ಹಾಡ್ತೀ, ನೀ ಇಲ್ ಇರ್ಬಾರ್ದಿತ್ತು ಕಣೇ ಅಮ್ಮ, ಯಾರಾದ್ರು ಸಂಗೀತಗಾರ್ರು ಮನೇಲ್ ಇದ್ದಿದ್ರೆ ಸುಬ್ಲಕ್ಷಿಮಿ ಮೀರುಸ್ತಿದ್ದೆ ಅಂದ,
ಅಯ್ಯೋ ಕೂಸೆ! ನನಿಗೇನ್ ಕಮ್ಮಿ ಆಗಿರೋದು ಈಗ, ಅಣ್ಣಯ್ಯಭಟ್ಟರ ಮಗಳು, ಶಂಕರಶಾಸ್ತ್ರಿಗಳ ಸೊಸೆ, ರಾಮಾಶಾಸ್ತ್ರಿಗಳ ಹೆಂಡತಿ, ನಂಜುoಡಶಾಸ್ತ್ರಿಯ ಅಮ್ಮ ಅಂತ ಹೆಮ್ಮೆಯಿಂದ ನಗುತ್ತಾ ಹೇಳಿದ್ದಳು.

ಕೇಳುತ್ತಾ ಕೇಳುತ್ತಾ ಕಣ್ಣ ಆಲೆಯಲ್ಲಿ ನೀರು ತುಂಬಿತ್ತು ಶಂಕ್ರುಗೆ.
ಅಜ್ಜಾ!, ನನಗೆ ಅಮ್ಮ ಯಾವತ್ತೂ ಗೊಜ್ಜವಲಕ್ಕಿ ಮಾಡಿ ಕಾಯುತ್ತಾ ಕೂತ ನೆನಪೇ ಇಲ್ಲ ಅಂತ ಅಜ್ಜನನ್ನು ತಬ್ಬಿದ.

ಆದರೆ ವರ್ಷಾ ವರ್ಷಾ, ಬೇರೆ ಬೇರೆ ದೇಶಕ್ಕೆ ಕರ್ಕಂಡ್ ಹೋಗಿ ತೋರುಸ್ತಾರಲ್ಲೋ, ನಿನ್ನ ಅಜ್ಜ ಪೂರ್ ಫೆಲ್ಲೋ, ನಿನ್ ಅಪ್ಪನಿಗೆ ಯಾವ ದೇಶಕ್ಕೂ ಕರ್ಕಂಡ್ ಹೋಗ್ಲಿಲ್ಲ ಅಂತ ನಗುತ್ತಾ ಕಿಚಾಯಿಸಿದರು!
ಅದು ಹೌದು, ಆದ್ರೆ ಪಕ್ಕದಲ್ಲಿ ಕೂರುಸ್ಕಂಡು ಕಾರಲ್ಲಿ ಜಗತ್ತು ತೋರ್ಸೋ ಅಪ್ಪನಿಗಿಂತ, ಭುಜದಮೇಲೆ ಕೂರುಸ್ಕಂಡು ಕಾಲಲ್ಲಿ ನಡೆದು ಜಗತ್ತು ತೋರ್ಸೋ ಅಜ್ಜನೇ ಚಂದ ನನಗೆ ಅಂತ ಬಾಚಿ ತಬ್ಬಿದ.

ಸೂರ್ಯ ಮುಳುಗಿದ್ದ! ಕತ್ತಲು ಆವರಿಸಿತ್ತು, ಆದರೆ ದಡಕ್ಕೆ ಅಲೆಗಳು ಬಂದು ಹೋಗುವಿಕೆ ನಿರಂತರ ನಡೆಯುತ್ತಿತ್ತು!

ಭಾನುವಾರ, ಏಪ್ರಿಲ್ 9, 2017

ಮಳೆ ಇಳೆ

ಸಂಜೆ ಐದರ ಸಮಯ, ದಟ್ಟವಾದ ಕಪ್ಪು ಮೋಡ ಸೂರ್ಯನನ್ನು ಮುಚ್ಚಿತ್ತು, ಎತ್ತಲಿಂದಲೋ ಬಂದ ತಂಪು ಗಾಳಿ ತರಗೆಲೆಗಳನ್ನು ತೂರುತ್ತಿತ್ತು, ಆಕಾಶದ ತುಂಬಾ ಮಿಂಚಿನ ಸಂಚಾರ, ಮುಂಗಾರಿನ ಆರ್ಭಟ, ಇನ್ನೇನು ಧುತ್ತನೆ ಸುರಿದೇ ಬಿಡುತ್ತದೆ ಅನ್ನೋವಷ್ಟರಲ್ಲಿ - ತಿಳಿಯಾದ ಆಕಾಶಕಂಡ ಭೂಮಿ ಮಂಕಾದಳು.

ಅಲ್ಲೇ ಕೂತಿದ್ದ ಗರುಡ ಪಕ್ಷಿಯ ಕರೆದು, ನೀ ಮೋಡದೆತ್ತರಕ್ಕೆ ಹಾರ್ತೀಯಲ್ಲಾ, ಹೋಗಿ ಕೇಳಿ ಬರುವೆಯಾ? ಯಾಕೆ ಇಷ್ಟು ಮುನಿಸು ಎಂದು ಸುದ್ದಿ ತರುವೆಯಾ ಅಂದಳು.

ಆಜ್ಞೆಯಂತೆ ಹಾರಿದ ಗರುಡ ಸರಕ್ಕನೆ ಹೋಗಿ ಬಂದು, ಅವನನ್ನು ಯಾರೂ ಕರಿಯಲಿಲ್ಲವಂತೆ, ಪ್ರತೀ ವರ್ಷ ಕರೆದು ಅಪ್ಪಿ ಆಲಂಗಿಸಿ ಆನಂದದಿಂದ ತೊಯ್ದು ಖುಷಿಪಡುತ್ತಿದ್ದ ಮರಗಳು ಇಲ್ಲವಾಗಿದೆಯಂತೆ.

-ಹರೀಶ್ 

ರಾಶಿ ರಾಶಿ ನಕ್ಷತ್ರ

ಹರೀ, ನಿಂದ್ ಯಾವ್ ರಾಶಿನೋ ಅಂತ ತಾತ ಕೇಳಿದ್ರು?
ಆ ದೇವ್ರಿಗೇ ಗೊತ್ತು, ಜೋಳದ್ದೋ ರಾಗೀದೋ ಇರ್ಬೇಕು, ಅದ್ರ ತಲೆ ಬುಡ ಗೊತ್ತಾಗಲ್ಲ ಅಂದೆ.

ಅಯ್ಯೋ ಮಂಕೆ, ಅಷ್ಟು ಓದಿ ದಬಾಕಿದೀನಿ ಅಂತೀಯಾ ಅಷ್ಟು ಗೊತ್ತಾಗಲ್ವೆ ಹೇಳ್ತೀನಿ ಕೇಳು.
ಅದೇ ನಮ್ ಬ್ರಮ್ಮಪ್ಪ ಇದಾನಾಲ ಅವ್ನ ಮಗ ದಕ್ಷನ್ಗೆ 27 ಜನ ಹೆಣ್ ಮಕ್ಳು, ಬೇರೆ ಕೆಲ್ಸಿರ್ಲಿಲ್ವೇ ಅಂತ ಬಾಯ್ ಹಾಕಿದ್ರೆ ತಲೆಮೇಲೆ ತಟ್ತೀನಿ ಪೂರ್ತಿ ಕೇಳು,

ಅವಕ್ಕೆ ಅಶ್ವಿನೀ,ಭರಣೀ,ಕೃತ್ತಿಕಾ,.,...,ರೇವತೀ ಅಂತ 27 ಬೇರೆ ಬೇರೆ ಹೆಸ್ರು ಇಟ್ಟ.
ಎಲ್ಲಾ ಮಕ್ಳು ಬೆಳೆದು ಮದ್ವೆಗೆ ಬಂದ್ವು, ಅದೇನ್ ತಲೆ ಕೆಟ್ಟಿತ್ತೋ ಏನೋ ಉದೋ ಅಂತ ಎಲ್ರುನೂ ನಮ್ ಚಂದ್ರುನ್ಗೆ ಕೊಟ್ಟು ಮದ್ವೆಯಾ ಮಾಡ್ಬುಡದೆ, ಥೋ!

ನಮ್ ಚಂದ್ರನೂ ಭಾರಿ ಖುಳ, ದುಡ್ದು ದುಡ್ದು 9 ಕೋಣೆ ಇರೋ ದೊಡ್ಡ ದೊಡ್ಡ 12 ಮನೆ ಕಟ್ಟಿದ್ದ, ಒಂದೊಂದು ಮನೆಗೂ ಮೇಷ, ವೃಷಭ, ಮಿಥುನ,.,.... ಮೀನ ಅಂತ ಹೆಸ್ರಿಟ್ಟಿದ್ದ.

ಪಾಪ, ಕಟ್ಕಂಡ್ ಮೇಲೆ ಬುಡಾಕಾಯ್ತದಾ, ಇರಾ ಹನ್ನೆಲ್ಡ್ ಮನೇನೇ ಸರ್ಯಾಗಿ ಓಬ್ಬೊಬ್ರಿಗೆ 4 ಕೋಣೆತರ ಮೇಷ ಮನೆಯಿಂದ ಹಂಚಿ ಎಲ್ರುನೂ ಕರ್ದು, ನೀವ್ ನೀವ್ ನಿಮ್ ನಿಮ್ ಕೋಣೆಲಿ ಇರಿ, ನಾನು ದಿನಕ್ ಒಂದ್ ಮನೆಗೆ ಬರ್ತೀನಿ ಅಂದ.

ಇದನ್ ಕೇಳಿದ್ ಹಿರೀ ಹೆಂಡ್ತಿ ಅಶ್ವಿನಿ ಶಾನೆ ಸಿಟ್ಗೆದ್ದು, ಒಂದ್ ಮನೇಲಿ ಮೂರ್ ಮೂರ್ ಹೆಂಡ್ರುನ್ ಮಡ್ಗಿ ಯಾರ್ ಜೊತೆ ಇರ್ತೀರ ಅಂತ ರೇಗಿದ್ಲು.

ಅದನ್ ಕೇಳಿ ಶಾನೆ ತಲೆ ಕೆಡುಸ್ಕಂಡ್ ಚಂದ್ರ ಒಂದ್ ಉಪಾಯವ ಮಾಡಿ, ಒಂದ್ ಕೆಲ್ಸವಾ ಮಾಡಣ, ಈ ದಿನದ್ ಲೆಕ್ಕಾಚಾರ ಬ್ಯಾಡ, ಒಂದೊಂದ್ ಕೋಣೇಲಿ ಆರ್ ಆರ್ ಘಂಟೆ ಇರ್ತೀನಿ ಅಂತ ತೀರ್ಮಾನ ಕೊಟ್ಟ.

ಅಷ್ಟೇ, ನೀನ್ ಹುಟ್ದಾಗ ಚಂದ್ರ ಯಾವ್ ಹೆಂಡ್ತಿ ಜೊತೆ ಇರ್ತಾನೋ ಅದೇ ನಿನ್ ನಕ್ಷತ್ರ, ಅವ್ರ ಮನೆ ಹೆಸ್ರೇ ನಿನ್ ರಾಶಿ.

ಅಜ್ಜೋ ಅಜ್ಜೋ ಅಜ್ಜೋ, ಹಂಗಾರೆ ಅಶ್ವಿನಿ ಮೊದಲ ಪಾದ ಅನ್ನೋ ಬದ್ಲು, ಅಶ್ವಿನಿ ಮೊದಲ ಕೋಣೆ ಅಂದ್ರೆ ಹೆಂಗಿರತ್ತೆ.

ಥೋ ಮುಂಡೇದೆ.

-ಹರೀಶ್

ಮಂಗಳವಾರ, ಡಿಸೆಂಬರ್ 27, 2016

ಪೊಲೀಸ್ ಸ್ಟೋರಿ

ಮೊನ್ನೆ ಭಾನುವಾರ ಬಸವನಗುಡಿಗೆ ಹೋದಾಗ, ಜೀವನದಲ್ಲಿ ನೆಗೆಟಿವ್ ಇರ್ಬಾರ್ದು, ನೊ ಅನ್ನೋ ಪದ ನನ್ನ ಡಿಕ್ಷನರಿಲೆ ಇಲ್ಲ ಅಂತ ಫೀಲಿಂಗ್ಲಿ, ನೊ ಪಾರ್ಕಿಂಗ್ ನ ಪಾರ್ಕಿಂಗ್ ಅನ್ಕೊಂಡು ಗಾಡಿ ನಿಲ್ಸಿದ್ದೆ.
ತಿರುಗಾಡಿ ಬರೋದ್ರೊಳಗೆ ಬೈಕು ಪೊಲೀಸ್ ಮನೆ ಸೇರಿತ್ತು. ಈ ಬ್ಲಾಕ್ ಮನಿ ಇರೋರು ಮೋದಿನ ಬಯ್ಯೋತರ ಬೈಕೊಂಡು ಹೋದೆ.

ಆ ಪೊಲೀಸ್ ಸ್ಟೇಷನ್ಲಿ ನಿಂತಿರೋರೆಲ್ಲ, ಏನೋ ಮುಖ್ಯ ಕೆಲಸಕ್ಕೆ ಬಂದೋ, ಹುಡ್ಗಿ ಕರ್ಕೊಂಡ್ ಬಂದು ಮರ್ಯಾದಿ ಹೋದೋರ್ತರ ಎಲ್ಲಾಕಡೆ ಉರ್ಕೊಂಡಿರೋರು.

ಈ ಗಾಡಿ ಎತ್ತಾಕಂಡು  ಬರೋರು ಪ್ರೈವೇಟ್ ಕಾಂಟ್ರಾಕ್ಟ್, ಅವ್ರು ಪೊಲೀಸ್ ಅಲ್ಲ, ಅದು ಗೊತ್ತಾಗಿ ಒಬ್ಬ ಸ್ವಲ್ಪ ಸದರ ತಗೊಂಡು, ಸಿಟ್ಟಲ್ಲಿ ನೀನ್ ಯಾವ ಶಾ ನೊ ನನ್ ಗಾಡಿ ತಗೊಂಡ್ ಬರಕ್ಕೆ, ಹಾಗೆ ಹೀಗೆ ಅಂದ.

ಅವ್ನಿಗೆ ಉರ್ದೋಗಿ, ಪೊಲೀಸ್ ಕರ್ಕಂಡ್ ಬಂದು, ಸರ್ ಇವ್ನು ಅವಾಚ್ಯ ಶಬ್ದದಿಂದ ಬೈತಾಯಿದಾನೆ ಸರ್, ಶಾX ಅಂತ ಬೈದ ಸರ್ ಅಂದ.
ಅದಕ್ಕೆ ಪೊಲೀಸ್ ಇನ್ನೂ ಒಂದು ಸ್ಟೆಪ್ ಮುಂದೆ ಹೋಗಿ ರಾಗಾತರ ಹೌದಾ ಹಾಗಾದ್ರೆ ಒಂದು ಕೇಸ್ ಫಿಟ್ ಮಾಡಿ ಕೂರ್ಸು ಅಂದ.

ಸಾರ್ ಸಾರ್, ಇವ್ನು ಸುಳ್ಳೇಳ್ತವ್ನೆ, ದೊಡ್ಡ ಪ್ರೆಸ್ಟಿಟ್ಯೂಟ್ ನನ್ಮಗ.

ಇಲ್ಲಾ ಸರ್ ಇವ್ನು ಶಾ ಅಂತ ಬೈದ ನಂಗೆ.

ಲೋ ಅಣ್ತಮ್ಮ, ಯಾರ್ಲಾ ನಿನ್ ಕನ್ನಡ ಮೇಸ್ಟ್ರು, ಶಾ ಅಂದ್ರೆ ಶಾX ಅಂತ ಹೇಳ್ಕೊಟ್ಟೋರು, ಶಾ ಅಂದ್ರೆ ಶಂಖ ಅಲ್ವೇನಲ ಮಳ್ಳೇ.

ನೊ ಕಿ ಮತಲಬ್ ನೊ ಹಿ ಹೋತಹೆ.
ಶಾ ಕಿ ಮಾತಲಬ್ ಶಾX ನಾ ಹೋತಹೆ.

ಭಾನುವಾರ, ಆಗಸ್ಟ್ 21, 2016

ಕಂದನ ಕೂಗು

ಧರಣಿಮಂಡಲ ಮಧ್ಯದೊಳಗೆ 
ಮೆರೆಯುತಿಹ ಕರ್ನಾಟ ರಾಜ್ಯದೊಳಿರುವ
ಕಂದಮ್ಮನೆoಬ ಅಮ್ಮನ ಕಥೆಯನಿಂತು ಕೇಳಿರಿ
ಕಡಿಮೆಯಿರುವ ಸಮಯದೊಳಗೆ
ವಾಚನೋಡುತ ಕಂದನಮ್ಮನು
ಬಳಸಿ ನಿಂತ ಕಂದನನ್ನು
ತಬ್ಬಿ ಹಿಡಿದಳು ಹರುಷದಿ
ಶಾಲೆಯಲ್ಲಿ ಓದಬೇಕು
ಕೊಟ್ಟ ಡಬ್ಬಿಯ ತಿನ್ನಬೇಕು
ಆಟವನ್ನು ಆಡಬೇಕು
ಎಂದು ಅಮ್ಮನು ಹೇಳಲು
ಅಮ್ಮ ಹೇಳಿದ ಮಾತು ಕೇಳಿ
ಎಲ್ಲದಕ್ಕೂ ನಗೆಯನಿತ್ತು
ಬಿಗಿದು ಅಪ್ಪಿ ಕೊರಳ ಹಿಡಿಯಲು
ಅಲ್ಲೆ ತುಂಬಿತು ಕಂಠವು
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
ಇಂದೆಮಗೆ ಪ್ರಾಜೆಕ್ಟು ಸಿಕ್ಕಿತು
ಇದನು ಬೇಗನೆ ಮುಗಿಸಬೇಕು
ಸಂಧಿಗ್ಧವ ಅರಿತುಕೊಳ್ಳಿ
ಎಂದನಾಫೀಸ್ ರಾಯನು
ಒಂದು ಭಿನ್ನಹ ರಾಯ ಕೇಳು
ಕಂದನಿರುವನು ಶಾಲೆಯೊಳಗೆ
ಒಂದು ನಿಮಿಷದಿ ಕರೆದು ಕೊಂಡು
ಬಂದು ಸೇರುವೆ ಇಲ್ಲಿಗೆ
ಬಿಡಲು ಒಲ್ಲೆ ಎಂಬ ಅವಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ಕರೆದು ಒಯ್ಯಲು
ನಾನು ಬಂದೆನು ಇಲ್ಲಿಗೆ
ದಿನವು ಇದುವು ಸಾಧ್ಯವಿಲ್ಲ
ಅವರು ನನ್ನ ಬಿಡುವುದಿಲ್ಲ
ನಾಳೆಯಿಂದ ಪ್ಲೇ ಹೋಮ್ಗೆ
ಹೋಗು ಎಂದಳು ಅಮ್ಮನು
ಆರ ಜೊತೆಯಲಿ ಆಡಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಒಟ್ಟಿಗೆ ಓದಲಮ್ಮ
ಆರು ಮo ಮo ಕೊಡುವರು
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
ಆಯಗಳಿರಾ ಮಿಸ್ಸುಗಳಿರಾ
ನಮ್ಮ ತಾಯೊಡುಹುಟ್ಟುಗಳಿರ
ನಿಮ್ಮ ಕಂದ ಎಂದು ಕಾಣಿರಿ
ನನ್ನ ಈ ಮಗುವನು
ಹಠವ ಹಿಡಿದರೆ ಹೊಡೆಯಬೇಡಿ
ತಪ್ಪುಗೈದರೆ ಗದರಬೇಡಿ
ಕಂದ ನಿಮ್ಮವನೆಂದು ಕಾಣಿರಿ
ನನ್ನ ಈ ಮಗುವನು
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
ಮಗುವ ಪ್ಲೇ ಹೋಮ್ಗೆ ಕಳಿಸಿ
ಸಾವಕಾಶವ ಮಾಡದಂತೆ
ಆಫೀಸಿನ ಸೀಟು ಸೇರಿ
ಸಿಟ್ಟಲೀ ಇವಳೆಂದಳು
ನೆನ್ನೆ ಕೆಲಸವು ಮುಗಿದಿದಿದೆ ಕೋ
ನಾಳೆ ಕೆಲಸವು ಮುಗಿದಿದಿದೆ ಕೋ
ಓ ರಾಯನೆ ನೀನಿದೆಲ್ಲವ
ನೋಡಿ ಸಂತಸದಿoದಿರು
ನೊಂದ ತಾಯಿಯ ಮಾತು ಕೇಳಿ
ಮುಖದಮೇಲೆ ನಗೆಯ ತಂದು
ನನ್ಮನೆದೂ ಇದುವೆ ಗೋಳೆಂದು
ಮುಂದೆ ನಡೆದನು ಕೆಲಸಕೆ
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
-ಹರೀಶ್

ಸೋಮವಾರ, ಜನವರಿ 18, 2016

ಶಾ(ಸಾ)ಲೆ

ವಯಸ್ಸಾಗಿ ಸುಕ್ಕುಗಟ್ಟಿದ ಮುಖ, ಇರುವ ಬಿಳಿ ಕೂದಲನ್ನ ಚೆನ್ನಾಗಿ ಕೊಬ್ಬರಿ ಎಣ್ಣೆ ಹಾಕಿ ಹಿಂದಕ್ಕೆ ಬಾಚಿದ ಕೂದಲು, ಕಾಖಿ ಅಂಗಿ ಕಾಖಿ ಪ್ಯಾಂಟು ಹಾಕಿ, ಹೆಗಲ ಮೇಲೆ ಒಂದು ಟವೆಲ್ ಹೊದ್ದ ಕುಳ್ಳು ದೇಹದ ರಂಗಪ್ಪನ ಮುಖದಲ್ಲಿ ಆಶ್ಚರ್ಯ!

ಓಹ್ ರಾಮಪ್ಪಾ, ಹೆಂಗಿದೀಯ, ಸಂದಾಗಿದೀಯ. ಏನ್ ಬಾಂಬೆಗೆ ಹೊದೊನ್ ಈಗ್ಲ ಕಾಣೋದು, ಏಟು ದಿನ ಆಯ್ತು.
ಹೂ ರಂಗಪ್ಪ ಚನಗಿದಿನಿ, ಏನ್ ಕೆಲಸ ಜೋರ. ಎಲ್ಲಾ ನಿಂದೆ ಉಸ್ತುವಾರಿನ ಈಗಲೂ ಶಾಲೆಲಿ.
ಏನ್ ಸಾಲೇನೋ ಏನೋ ದಣಿ, ನೀವ್ಗುಳು ಇದ್ದಾಗ ಇದ್ದಂಗಿಲ್ಲ, ಇಸ್ಕೂಲಿಗೆ  ಹುಡ್ಗುರೆ ಬರಕ್ಕಿಲ್ಲ ಅಂತವೇ.
ಆ ಪ್ರೈವೇಟ್ ಮುಂಡೆಮಕ್ಳು ಸುರು ಮಾಡಿದ್ಮೇಲೆ, ಈಕಡೆ ಹರ್ವು ಕಮ್ಮಿನೆ.

ಹಿಂದೆ ಎಸ್ಟ್ ಸಂದಾಗಿತ್ತು, ಸಾಲೆ ತುಂಬಾ ಮಕ್ಳು, ಒಂದ್ನೇಕಿಲಾಸಿಂದ ಏಳ್ನೆ ಕಿಲಾಸ್ತನ ಹೈಕ್ಳೋ ಹೈಕ್ಳು, ಒಲ ಊಳೋ ಮಾದನ ಮಕ್ಳು ಇದೆ ಇಸ್ಕೂಲು, ಡಿಸಿ ಆಪಿಸರ್ ಮಕ್ಳು ಇದೆ ಇಸ್ಕೂಲು.
ನೀವ್ ಕಂಡಂಗೆ ಆ ಡಾಕುಟ್ರು ಸೇಸಾದ್ರಪ್ನೋರ ಮಕ್ಳು ಇಲ್ಲೇ ಅಲ್ವೇ ಬತ್ತಿದ್ದು. ಇಲ್ ಅಲ್ದೆ ಇನ್ನೆಲ್ ಹೋಗ್ತವೆ. ದೊಡ್ ದೊಡ್ ಆಪೀಸರ್ ಮಕ್ಳಿಗ್ ತಾಕೀತ್ ಮಾಡಿವ್ನಿ ನಾನು, ಅಂತ ಮೀಸೆ ಮೇಲೆ ಕೈ ಹಾಕಿದ.

ಹೂ  ಹೌದು. ಇದೊಂದೇ ಅಲ್ವೇ ಇದ್ದದ್ದು, ಬಹಳ ಕಳಕಳಿಯಿಂದ  ಕಲಿಸುತ್ತಿದ  ಕನ್ನಡದ ಸೀತಾರಾಮಯ್ಯ ಮೇಷ್ಟ್ರು, ಲೆಕ್ಕದಲ್ಲಿ ಲಾಯಕ್ಕಿದ್ದ ಉಮೇಶಪ್ಪ, ಇತಿಹಾಸವನ್ನು ಹೇಳಕ್ಕೆ ಬರದಿದ್ದರೂ ಪರೀಕ್ಷೆಲಿ ಅಂಕ ಬರುವಷ್ಟು ಕತೆ ಹೇಳುತ್ತಿದ್ದ ಪುಷ್ಪ ಟೀಚರ್.
ಮಕ್ಕಳನ್ನ ಮುಖ್ಯಮಂತ್ರಿ ಮಾಡೂದೆನು, ಸಫಾಯಿ, ವೇಳಾ, ಉಸ್ತುವಾರಿ, ನೀರಾವರಿ. ಅಬ್ಬಾ ಎಷ್ಟು ಮಂತ್ರಿಗಳು. ಹ ಹ. ಹಾಗೇ ನೆನಪಿನ ಹರಿವು ಬಂದಂಗೆ ಪಟ ಪಟನೆ ಹೇಳಿದ.

ಈಗ್ಲೂ ಅದೆ, ನೆಟ್ಟಗೆ  ಐವತ್ತು ಮಕ್ಳಿಲ್ಲ, ಓದಿದ್ರೆಷ್ಟು ಬುಟ್ರೆಷ್ಟು, ಮನೇಲಿ ಕಿತಾಪತಿ ಮಾಡ್ತವೆ ಮುಂಡೇವು ಅಂತ ಇಲ್ಲಿ ತಕ್ಕಬಂದ್ ಬುಟ್ಟವ್ರೆ ಅನ್ನೋತರ ಐತೆ. ಅದ್ರುಮೇಲೆ ಈ ಮೆಟ್ರಿಗೂ ಆಸ್ತೆ ಅಷ್ಟುಕ್ಕಷ್ಟೇ,
ಹಿಂದ್ಲಂಗೆಲ್ಲಾ ಕಲ್ಸುದಿಲ್ಲ, ಮಕ್ಳು ಮುಕ್ಳಿಮೇಲೆ ಬಿಟ್ಟು ತಿದ್ದಂಗಿಲ್ಲ. ಅಲ್ಲದಣಿ, ತ್ಯಪ್ ಮಾಡಿದ್ರೆ ಓಕ್ಕಳ್ಳಿ ಅಂತ ಬುದ್ಬೇಕಂತೆ, ಕುಣಕoತ ಪಾಠವ ಹೇಳ್ಬೇಕಂತೆ.
ಮಕ್ಳು ತ್ಯಪ್ ಮಾಡ್ದಾಗ ನಾಕ್ ಬಿಡ ಬದ್ಲು, ಫಿಲಂನವರ ತರ ಡ್ಯಾನ್ಸ್ ಮಾಡಿದ್ರೆ, ಆ ಮುಂಡೆ ಮಕ್ಳಿಗ್ ಇದ್ಯೆ ತಲಿಗ್ ಓಗದಾದ್ರು ಎಂಗೆ ಅಂತೀನಿ.
ಅದ್ರುಮೇಲೆ ಊಟ ಕೊಡೊ ಕಾನೂನ್ ಬೇರೆ ಬಂದದೆ ಈಗ, ಮುಂಡೇವ್ಕೆ ಇದ್ಯೆಗಿಂತ ನೈವೇದ್ಯೇ ಮೇಲೇ ಕಣ್ಣು, ಏನ್ ರಂಗಣ್ಣ ಸಾಂತವ್ವ ತಿನ್ನಕ್ ಏನ್ ಮಾಡವ್ಳೆ ಇವತ್ತು ಅಂತವೆ ತ್ಯಪ್ರು ಮುಂಡೇವು.
ಆಕಡೆ ಚಿತ್ರನ್ನ ಘಮ್ಗುಟ್ಟoಗಿಲ್ಲ, ಇತ್ಲಗಲೇ ಪಾಠ ಗೀಟ ಎಲ್ಲಾ ಓದಂಗೆಯ. ಈತರ ಇದ್ಯೆಯ ಕಲುತ್ರೆ, ಬೆಳ್ದಿoಗ್ಳಿಗೆ ಆವಿಯಾಯ್ತದೆ ಇದ್ಯೆ.
ಹಿಂದೆಲ್ಲ ಮ್ಯಾಡoಗಳು, ರಂಗಪ್ಪ, ಆ ನಾಟಕ್ವ ಮಾಡ್ಸೋಣು, ಹೆಣ್ ಮಕ್ಳಿಗೆ ಹಾಡು ರಂಗೋಲಿ ಹೇಳ್ ಕೊಡೋಣು, ಅದಕ್ಕೇ ಆ ಪುಸ್ತಕ್ವಾ ತಕ್ಕೊಂಬಾ, ಬಣ್ಣದ ಕೋಲ್ ತಕ್ಕೊಂಬಾ, ಒಸಿ ಮುಂಚೆ ಬಂದು ಕಿಲೀನು ಮಾಡು ಅಂತಿದ್ರೆ,
ಇವು, ಏನ್ ಊಟಕ್ ಇವತ್ತು, ಏನ್ ಮಾಡವ್ಳೆ ಸಾಂತವ್ವ, ಇವತ್ತು ಕೀರ್ ಮಾಡಕ್ ಹೇಳು, ಉಳ್ಲಾಗಡ್ಡಿ ಕಾಲಿಯಾಗದೆ ಜೊತೆಗೆ ಬೆಲ್ವಾ ತಕ್ಕೊಂಬಾ. ಬಡಕಬೇಕು ಇವ್ರ್ ಸಿಕ್ಸಣಕ್ಕೆ. ಪಾಟ್ವಾ ಕಲ್ಸೋ ಮುಸುಡಿಯ ಅದು, ಬಾಯ್ ಬಿಟ್ರೆ ಬಂಡಗೇಡು.  

ಈ ಕತೆಲಿ ಬರ್ಬರ್ತಾ ಬರ್ಬರ್ತಾ, ಎಲ್ಲ ಮುಗಿತದೆ. ಸಾಲೆಯ ಮುಚ್ತಾರೆ, ಅಲ್ಲಿಗ್ ನಾನು ನನ್ನ ಸರ್ವಿಸ್ ಮುಗುಸ್ತಿನಿ, ಇನ್ನೊಂದ್ ಮೂರ್ ಉಗಾದಿ ಕಳದ್ರೆ ನಾನು ಮನೆಯ ಸೇರ್ಕೊಳದೆ.  
ಗೊರ್ಮೆಂಟ್ಗೆ ಸರ್ಕಾರ್ವ ನಡ್ಸುಕ್ ಆಗುಕ್ಕಿಲ್ಲ, ಇನ್ ಸಾಲಿನ.. ಕಣಸು..

ಚಿಕ್ ವಯಸಿನ್ ಇದ್ಯೇನ ಒಬ್ರಿಗ್ ಒಂದು, ಇನ್ನೊಬ್ರಿಗ್ ಒಂದು ಕೊಟ್ರೆ ಸಮಾಜ ಉಳಿತದಾ ದಣಿ, ಏರು ಪೇರು ಉಟ್ಟಿ ಸಾಯ್ತವೆ ಪಾಪ. ಈ ಪ್ರೈವೇಟ್ ನನ್ ಮಕ್ಳಿಂದ ಆಗ್ತಿರೋದ್ ಇದೆಯಾ...

-ಹರೀಶ್

ಶುಕ್ರವಾರ, ಜುಲೈ 17, 2015

ಸಾಫ್ಟ್ವೇರ್ ಉದ್ಯೋಗ -


ಎಲ್ಲರೂ ಬಯ್ಯಲು ನಾಲಿಗೆ ತುದಿಯಲ್ಲಿರುವ, ವಿಡಂಬನೆಗೆ ಸಹಕರಿಸುವ, ಎಲ್ಲ ತಂದೆ ತಾಯಿಯರೂ ತಮ್ಮ ಮಕ್ಕಳು ಅದಾಗಬೇಕೂ ಅಂತ ಬಯಸುವ, ಅದಾಗಿಸಿದ ಮೇಲೆ, ಅಯ್ಯೋ ಅವನು ನಮ್ಮ ಬಳಿ ಇರೋಲ್ಲ ಅಂತ ಗೋಳಾಡಿಸುವ ಉದ್ಯೋಗ. ಒಂದುತರ ಬೆಂಗಳೂರಿನ ಪರಿಸ್ಥಿತಿ ಈ ಉದ್ಯೋಗಿಗಳಿಗೆ. ಎಲ್ಲರಿಗೂ ಬೇಕು ಹಾಗೆ ಎಲ್ಲರಿಗೂ ಬೇಡ.

ಅದು ಯಾರ ಬಲವಂತವೂ ಇಲ್ಲದೆ, ಮುಂದೆ ಮಾಡುವ ಕೆಲಸದ ಪರಿವೂ ಇಲ್ಲದೆ ಶುಬ್ರ ಅನ್ನುವುದಕ್ಕಿಂತ ಖಾಲಿ ಮನಸ್ಸಿನಲ್ಲಿ ಇಂಜಿನಿಯರ್ ಕಾಲೇಜಿಗೆ ಸೇರಿದ ನಮ್ಮಂತ ಮನಸ್ಸುಗಳೇ ಬಹುತೇಕ. ಅದು ಏನು ಕಲಿಸಿದರೋ, ಅದು ಏನು ಕಲಿತೆವೋ. ಒಟ್ಟಿನಲ್ಲಿ ಒಂದು ಬೀಜವನ್ನು ಕುಂಡದಲ್ಲಿಟ್ಟು ಸಸಿ ಮಾಡಿ ಬದುಕಿಕೋ ಅಂತ ಬಯಲಿಗೆ ಬಿಟ್ಟರು.

ಬಯಲಿನ ಪರಿಸ್ಥಿತಿಗೆ ಹೊಂದಲಾರದೆ ಹಪತಪಿಸುತ್ತಿದ್ದ ಸಮಯದಲ್ಲಿ, ಆ ಸಸಿಯನ್ನು ಬೆಳೆಸಿ ಪೋಷಿಸಿ, ಫಲವನ್ನು ಪಡೆಯುತ್ತಿರುವುದು ಈ ಕ್ಷೇತ್ರಗಳು.
ಬೆಳೆದು ದೊಡ್ಡದಾದ ಮೇಲೆ, ನನ್ನ ಪ್ರಯತ್ನದಿಂದ ನಾನು ದೊಡ್ದದಾದೆ, ನೀ ಕೊಡುತ್ತಿರುವ ಆಹಾರ ನಾ ಕೊಡುತ್ತಿರುವ ಫಲಕ್ಕೆ ಸರಿ ಇಲ್ಲ. ಇದೇ ಫಲ ಅಲ್ಲಿ ಕೊಟ್ಟರೆ ಅಂತ ಯೋಚನೆ.

ಜ್ಞಾನದ ಆಳಕ್ಕೆ ಇಳಿಯಲು ಸಮಯದ ಅಭಾವವೋ, ಆಸಕ್ತಿಯ ಕೊರತೆಯೋ ಅಥವಾ ಅವಶ್ಯಕತೆ ಇಲ್ಲ ಎಂಬ ಭಾವವೋ, ಒಟ್ಟಿನಲ್ಲಿ, ಬಟ್ಟಲಿನಲ್ಲಿ ನೀರನ್ನು ತುಂಬಿಕೊಂಡು ಸಮುದ್ರದಂತೆ  ಬೀಗುತ್ತಾ, ಅವಶ್ಯಕತೆ ಬಿದ್ದಾಗ ಬಟ್ಟಲಿನ ನೀರು ಸಾಕಾಗದೆ, ತೊಳಲಾಡಿ, ಸರಸ್ವತಿಯಿಂದ ಲಕ್ಷ್ಮಿ ಅನ್ನೋದನ್ನು ಮರೆತು, ಲಕ್ಷ್ಮಿಗಾಗಿ ಸರಸ್ವತಿ ಅನ್ನೋ ಮನಸ್ಥಿತಿ ತಲುಪಿ, ಮತ್ತೆ, ಇದ್ದ ಬಟ್ಟಲಿನ ನೀರನ್ನೇ ಸೋಸಿ ತಯಾರು ಮಾಡಿಕೊಂಡು ಬೇರೆ ಜಾಗಕ್ಕೆ ಗುಪ್ತಗಾಮಿನಿಯoತೆ ಪ್ರವಹಿಸಿ ಬಿಡುವುದು. ಅಲ್ಲಿ ಮತ್ತದೇ ಆರ್ಭಟ.


ತಾವು ಮಾಡುತ್ತಿರುವ ಉದ್ಯೋಗವೊಂದನ್ನು ಬಿಟ್ಟು ಬೇರೆಲ್ಲಾ ಕೆಲಸಗಳು ಚೆನ್ನಾಗಿದೆ, ಏನೋ ಯಾವುದೋ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈ ಉದ್ಯೋಗ ಅನ್ನೋ ಭಾವವವನ್ನು ತೋರುತ್ತಾ, ನೆಮ್ಮದಿ ಕೆಳದುಕೊಂಡು, ಸಮೋಸ ಮಾರಿದ್ರೆ ಇದಕ್ಕಿಂತ ಜಾಸ್ತಿ ಬರ್ತಿತ್ತು, ಪಾನಿ ಪೂರಿಯೋನು ನಮಗಿಂತ ಜಾಸ್ತಿ ದುಡಿತಾನೆ ಅಂತ ಹಣದ ಲೆಕ್ಕದಲ್ಲಿ ತಮ್ಮನ್ನು ತಾವು ತೂಗಿಸಿಕೊಳ್ಳುತ್ತಾ ತಮ್ಮ ಜ್ಞಾನದ ದೇಹವನ್ನು ಬೆತ್ತಲಾಗಿಸಿ, ಗಂಟೆಗೊಂದು ಸಲ ಕಾಫಿ ಚಹಾ ಕುಡಿಯುವುದು,ಸಿಗರೇಟು ಸೇದುವುದು.
ಚಹಾ ಅಂಗಡಿಯವನು, ಪಾಪ! ಕೆಲಸ ಮಾಡಿ ಮಾಡಿ ತಲೆ ಕೆಟ್ಟಿರತ್ತೆ ಅಂತ ಅವಾ ಲೋಚಗುಟ್ತಾನೆ. ಆದ್ರೆ, ಹೋಗ್ತಾ ದುಡ್ಡು ಕೊಡುವಾಗ, ಎಸ್ಟ್ ದುಡಿತೀಯ ದಿನಕ್ಕೆ ಅಂತ ಕೇಳಿ ಇವ ಮುಂದಿನ ಚಹಾಕೆ ತಯಾರಿ ತಗೋತಾನೆ.

ಈ ಕೆಲಸ, ಬಿಡಿಸಿ ತಿನ್ನಬೇಕಾದ ಹಣ್ಣಿನoತೆ ಕಂಡರೆ, ಬೇರೆಲ್ಲಾ, ಬಿಡಿಸಿ ತಿನ್ನಲು ತಯಾರಾದ ಹಣ್ಣುಗಳoತೆ ಕಾಣುತ್ತವೆ.        

ಹಾಗೇ ಜಲಪಾತ ಕಾದoಬರಿಯಲ್ಲಿ ಓದಿದ್ದ ನೆನಪು, ಪ್ರಸವದ ನೋವು, ಸಹಜವಾಗಿ ಹೆರುವ ಎಲ್ಲ ಹೆಣ್ಣಿಗೂ ಒಂದೇ. ಅದನ್ನು ಮುಂದೆಬರುವ ಮಗುವಿಗಾಗಿ ಅವಡುಗಚ್ಚಿ ಅನುಭವಿಸುತ್ತಾಳೆ, ನೋವು ಬರದಿದ್ದಲ್ಲಿ ಹೆದರಿ ನೋವು ಬರಲಿ ಅಂತ ಭಗವಂತನಲ್ಲಿ ಪ್ರಾರ್ಥಿಸುತ್ತಾಳೆ ಅಂತ.            
         
-ಹರೀಶ್