ಭಾನುವಾರ, ಏಪ್ರಿಲ್ 9, 2017

ಮಳೆ ಇಳೆ

ಸಂಜೆ ಐದರ ಸಮಯ, ದಟ್ಟವಾದ ಕಪ್ಪು ಮೋಡ ಸೂರ್ಯನನ್ನು ಮುಚ್ಚಿತ್ತು, ಎತ್ತಲಿಂದಲೋ ಬಂದ ತಂಪು ಗಾಳಿ ತರಗೆಲೆಗಳನ್ನು ತೂರುತ್ತಿತ್ತು, ಆಕಾಶದ ತುಂಬಾ ಮಿಂಚಿನ ಸಂಚಾರ, ಮುಂಗಾರಿನ ಆರ್ಭಟ, ಇನ್ನೇನು ಧುತ್ತನೆ ಸುರಿದೇ ಬಿಡುತ್ತದೆ ಅನ್ನೋವಷ್ಟರಲ್ಲಿ - ತಿಳಿಯಾದ ಆಕಾಶಕಂಡ ಭೂಮಿ ಮಂಕಾದಳು.

ಅಲ್ಲೇ ಕೂತಿದ್ದ ಗರುಡ ಪಕ್ಷಿಯ ಕರೆದು, ನೀ ಮೋಡದೆತ್ತರಕ್ಕೆ ಹಾರ್ತೀಯಲ್ಲಾ, ಹೋಗಿ ಕೇಳಿ ಬರುವೆಯಾ? ಯಾಕೆ ಇಷ್ಟು ಮುನಿಸು ಎಂದು ಸುದ್ದಿ ತರುವೆಯಾ ಅಂದಳು.

ಆಜ್ಞೆಯಂತೆ ಹಾರಿದ ಗರುಡ ಸರಕ್ಕನೆ ಹೋಗಿ ಬಂದು, ಅವನನ್ನು ಯಾರೂ ಕರಿಯಲಿಲ್ಲವಂತೆ, ಪ್ರತೀ ವರ್ಷ ಕರೆದು ಅಪ್ಪಿ ಆಲಂಗಿಸಿ ಆನಂದದಿಂದ ತೊಯ್ದು ಖುಷಿಪಡುತ್ತಿದ್ದ ಮರಗಳು ಇಲ್ಲವಾಗಿದೆಯಂತೆ.

-ಹರೀಶ್ 

ರಾಶಿ ರಾಶಿ ನಕ್ಷತ್ರ

ಹರೀ, ನಿಂದ್ ಯಾವ್ ರಾಶಿನೋ ಅಂತ ತಾತ ಕೇಳಿದ್ರು?
ಆ ದೇವ್ರಿಗೇ ಗೊತ್ತು, ಜೋಳದ್ದೋ ರಾಗೀದೋ ಇರ್ಬೇಕು, ಅದ್ರ ತಲೆ ಬುಡ ಗೊತ್ತಾಗಲ್ಲ ಅಂದೆ.

ಅಯ್ಯೋ ಮಂಕೆ, ಅಷ್ಟು ಓದಿ ದಬಾಕಿದೀನಿ ಅಂತೀಯಾ ಅಷ್ಟು ಗೊತ್ತಾಗಲ್ವೆ ಹೇಳ್ತೀನಿ ಕೇಳು.
ಅದೇ ನಮ್ ಬ್ರಮ್ಮಪ್ಪ ಇದಾನಾಲ ಅವ್ನ ಮಗ ದಕ್ಷನ್ಗೆ 27 ಜನ ಹೆಣ್ ಮಕ್ಳು, ಬೇರೆ ಕೆಲ್ಸಿರ್ಲಿಲ್ವೇ ಅಂತ ಬಾಯ್ ಹಾಕಿದ್ರೆ ತಲೆಮೇಲೆ ತಟ್ತೀನಿ ಪೂರ್ತಿ ಕೇಳು,

ಅವಕ್ಕೆ ಅಶ್ವಿನೀ,ಭರಣೀ,ಕೃತ್ತಿಕಾ,.,...,ರೇವತೀ ಅಂತ 27 ಬೇರೆ ಬೇರೆ ಹೆಸ್ರು ಇಟ್ಟ.
ಎಲ್ಲಾ ಮಕ್ಳು ಬೆಳೆದು ಮದ್ವೆಗೆ ಬಂದ್ವು, ಅದೇನ್ ತಲೆ ಕೆಟ್ಟಿತ್ತೋ ಏನೋ ಉದೋ ಅಂತ ಎಲ್ರುನೂ ನಮ್ ಚಂದ್ರುನ್ಗೆ ಕೊಟ್ಟು ಮದ್ವೆಯಾ ಮಾಡ್ಬುಡದೆ, ಥೋ!

ನಮ್ ಚಂದ್ರನೂ ಭಾರಿ ಖುಳ, ದುಡ್ದು ದುಡ್ದು 9 ಕೋಣೆ ಇರೋ ದೊಡ್ಡ ದೊಡ್ಡ 12 ಮನೆ ಕಟ್ಟಿದ್ದ, ಒಂದೊಂದು ಮನೆಗೂ ಮೇಷ, ವೃಷಭ, ಮಿಥುನ,.,.... ಮೀನ ಅಂತ ಹೆಸ್ರಿಟ್ಟಿದ್ದ.

ಪಾಪ, ಕಟ್ಕಂಡ್ ಮೇಲೆ ಬುಡಾಕಾಯ್ತದಾ, ಇರಾ ಹನ್ನೆಲ್ಡ್ ಮನೇನೇ ಸರ್ಯಾಗಿ ಓಬ್ಬೊಬ್ರಿಗೆ 4 ಕೋಣೆತರ ಮೇಷ ಮನೆಯಿಂದ ಹಂಚಿ ಎಲ್ರುನೂ ಕರ್ದು, ನೀವ್ ನೀವ್ ನಿಮ್ ನಿಮ್ ಕೋಣೆಲಿ ಇರಿ, ನಾನು ದಿನಕ್ ಒಂದ್ ಮನೆಗೆ ಬರ್ತೀನಿ ಅಂದ.

ಇದನ್ ಕೇಳಿದ್ ಹಿರೀ ಹೆಂಡ್ತಿ ಅಶ್ವಿನಿ ಶಾನೆ ಸಿಟ್ಗೆದ್ದು, ಒಂದ್ ಮನೇಲಿ ಮೂರ್ ಮೂರ್ ಹೆಂಡ್ರುನ್ ಮಡ್ಗಿ ಯಾರ್ ಜೊತೆ ಇರ್ತೀರ ಅಂತ ರೇಗಿದ್ಲು.

ಅದನ್ ಕೇಳಿ ಶಾನೆ ತಲೆ ಕೆಡುಸ್ಕಂಡ್ ಚಂದ್ರ ಒಂದ್ ಉಪಾಯವ ಮಾಡಿ, ಒಂದ್ ಕೆಲ್ಸವಾ ಮಾಡಣ, ಈ ದಿನದ್ ಲೆಕ್ಕಾಚಾರ ಬ್ಯಾಡ, ಒಂದೊಂದ್ ಕೋಣೇಲಿ ಆರ್ ಆರ್ ಘಂಟೆ ಇರ್ತೀನಿ ಅಂತ ತೀರ್ಮಾನ ಕೊಟ್ಟ.

ಅಷ್ಟೇ, ನೀನ್ ಹುಟ್ದಾಗ ಚಂದ್ರ ಯಾವ್ ಹೆಂಡ್ತಿ ಜೊತೆ ಇರ್ತಾನೋ ಅದೇ ನಿನ್ ನಕ್ಷತ್ರ, ಅವ್ರ ಮನೆ ಹೆಸ್ರೇ ನಿನ್ ರಾಶಿ.

ಅಜ್ಜೋ ಅಜ್ಜೋ ಅಜ್ಜೋ, ಹಂಗಾರೆ ಅಶ್ವಿನಿ ಮೊದಲ ಪಾದ ಅನ್ನೋ ಬದ್ಲು, ಅಶ್ವಿನಿ ಮೊದಲ ಕೋಣೆ ಅಂದ್ರೆ ಹೆಂಗಿರತ್ತೆ.

ಥೋ ಮುಂಡೇದೆ.

-ಹರೀಶ್