ಮಂಗಳವಾರ, ಸೆಪ್ಟೆಂಬರ್ 12, 2023

ಬಡತನ?

ನಾನು ಚಿಕ್ಕವನಿದ್ದಾಗ, ನಮ್ಮ ಮನೆಲಿ ಇದ್ದದ್ದು ನೀರು ಕಾಸಲು ಹಂಡೆಯ ಒಲೆ, ಅಡಿಗೆ ಮಾಡಲು ಸೌದೆ ಒಲೆ. ನಮ್ಮ ಪಕ್ಕದ ಮನೇಲೂ ಅದೇ ಇದ್ದದ್ದು. 

ಸ್ವಲ್ಪ ಶ್ರೀಮಂತರ ಮನೆಗೆ ಹೋಗಿ ನೋಡದ ಹೊರೆತು ನಮಗೆ ಗ್ಯಾಸ್ ಒಲೆ, ಬಾಯ್ಲಾರ್ ಗೀಝರ್ ಇದೆ ಅಂತಾನೆ ಗೊತ್ತಿರ್ಲಿಲ್ಲ. 
ಹೀಗೆ ಗೊತ್ತಿಲ್ಲದ ಕಾರಣ ಹಂಡೆ ಒಲೆಲಿ ನೀರು ಕಾಸೋದು ಕಷ್ಟ, ಸೌದೆ ಒಲೆಲಿ ಅಡಿಗೆ ಮಾಡೋದು ನರಕ ಅಂತಾರೆ ಅಂತಾನೆ ಗೊತ್ತಿರ್ಲಿಲ್ಲ, ಅದರಲ್ಲೇ ಮಾಡ್ಕಂಡ್ ಜೀವನ ಕಳೀತಾ ಇದ್ವಿ. 
ಸುಲಭದ್ದು ಒಂದು ಬಂದಿದೆ, ಅದು ನಮ್ಮ ಹತ್ರ ಇಲ್ಲ ಅನ್ನೋತನಕ ನಾವು ಮಾಡ್ತಾ ಇರೋದು ಕಷ್ಟ ಅಂತ ಅನ್ಸಲ್ಲ… 

ಇನ್ನೊಂದು ಉದಾಹರಣೆ ಅಂದ್ರೆ, ಹಿಂದೆ ಇದ್ದದ್ದು ರೈಲು ಮತ್ತೆ ಕೆಂಪು ಬಸ್ಸು, ಬೆಂಗಳೂರಿಗೆ ಬರೋಕೆ ಇಡೀ ದಿನ ಬೇಕಿತ್ತು,ಜನ ಅರಾಮ್ ಬರ್ತಾ ಇದ್ರು, 
ರಾಜಹಂಸ ಬಂದಮೇಲೆ - ರಾಜಹಂಸದಲ್ಲಿ ಬರೋರಿಗೆ ಕೆಂಪು ಬಸ್ಸಲ್ಲಿ  ಬರೋರ ಬಗ್ಗೆ ಅಯ್ಯೋ ಪಾಪ ಭಾವ ಮೂಡಿತು, 
ವೋಲ್ವೋ ac ಬಸ್ಗಳು ಬಂದಮೇಲೆ, ರಾಜಹಂಸದೋರು ಮಿಡಲ್ ಕ್ಲಾಸ್ ಆದ್ರು, ಕೆಂಪು ಬಸ್ ಅವ್ರು ಬಡವರಾದ್ರು,
ಇನ್ನು ಕಾರ್ ಬಂದಮೇಲೆ, ವೋಲ್ವೋ ಬಸ್ ಲಿ ಬರೋರು ಕೂಡ ಮಿಡಲ್ ಕ್ಲಾಸ್ ಆಗೋದ್ರು. 
ಹೀಗೆ ಬಡತನ ಅನ್ನೋದರ ಡೆಫಿನಿಷನ್ ಚೇಂಜ್ ಅಗ್ತಾ ಹೋಯ್ತು. 
ಹಾಗಾದ್ರೆ ಈಗ ಕೆಂಪು ಬಸ್ ಲಿ ಓಡಾಡೋನು ಬಡವನಾ. ಅಂದರೆ, ಸಂಪಾದನೆ ಹೆಚ್ಚು ಹೆಚ್ಚು ಮಾಡದೇ ಇರೋದು ಬಡತನವಾ?

ಒಂದು ಕಾಲದಲ್ಲಿ ಕೆಂಪು ಹಂಚಿನ ಮನೆ, ಸುಟ್ಟ ಇಟ್ಟಿಗೆ ಮನೆ ಕಟ್ಟಿದ್ರೆ ಅದೇ ಶ್ರೀಮಂತಿಕೆಯ ಕುರುಹು ಯಾಕೆ ಅಂದ್ರೆ ಎಲ್ಲ ಕಟ್ಟುತಾ ಇದ್ದದ್ದು ಮಣ್ಣಿನ ಗೋಡೆ ಮತ್ತೆ ಕರಿ ಹಂಚಿನ ಮನೆಗಳನ್ನ. 
ಈಗ ಕೆಂಪು ಹಂಚಿನ ಮನೆಗಳು ಬಡತನದ ಕುರುಹಾಗಿದೆ. 
ಸೈಕಲ್ ಇದ್ದೋನು ಶ್ರೀಮಂತ ಅನ್ನೋ ಕಾಲ ಒಂದು, ಈಗ ಸೈಕಲ್ ಲಿ ಓಡಾಡೋನು ಬಡವ.
ಕೀಪ್ಯಾಡ್ ಇದ್ದ ಮೊಬೈಲ್ ಫೋನ್ ಒಂದು ಕಾಲದ ಶ್ರೀಮಂತಿಕೆ, ಈಗ... 
ಮನೆಯಲ್ಲಿ ರೇಡಿಯೋ,ಟೇಪ್ರೆಕಾರ್ಡರ್ ಇದ್ದ ಕಾಲ ಶ್ರೀಮಂತಿಕೆ, ಈಗ..
ಮನೆಯಲ್ಲಿ ಬ್ಲಾಕ್ ಅಂಡ್ ವೈಟ್ ಟಿವಿ ಇದ್ದ ಕಾಲ ಶ್ರೀಮಂತಿಕೆ, ಈಗಲು ಅದೇ ಇರೋ ಮನೆ..? 

ಇರೋಕೆ ಒಂದು ಸಾಧಾರಣ ಹಂಚಿನ ಮನೆ, ಊರಲ್ಲಿ ಸುತ್ತಾಡೋಕೆ ಒಂದು ಸೈಕಲ್, ಮನೋರಂಜನೆಗೆ ಒಂದ್ ಬ್ಲಾಕ್ ಅಂಡ್ ವೈಟ್ ಟಿವಿ, 
ನೆಂಟರ ಬಳಿ ಮಾತಾಡೋಕೆ ಒಂದು ಚಿಕ್ಕ ಫೋನು.ಸಮಾರಂಭಗಳಿಗೆ ಹೋಗಿ ಬರೋಕೆ ಕೆಂಪು ಬಸ್ಸು ಅಥವಾ ರೈಲಿಗೆ ಆಗೋ ಅಷ್ಟು ಖರ್ಚು. 
ಇವೆಲ್ಲವನ್ನೂ ಸಂಬಾಳಿಸೋವಷ್ಟು ಸಂಬಳ ಬಂದರೆ ಒಂದು ಕಾಲದಲ್ಲಿ ನಿಮ್ಮನ್ನ ಶ್ರೀಮಂತ ಅಂತ ಕರೀತಾ ಇದ್ರು! ಆದರೆ ಈಗ ಸರ್ಕಾರಗಳು ಇವರನ್ನ ಬಡವ ಅಂತ ಹೇಳಿ, ಎಲ್ಲ ಭಾಗ್ಯಗಳನ್ನು ಸುರಿಯತ್ತೆ. ಬಡತನ ನಿರ್ಮೂಲನೆ ಮಾಡ್ತಾ ಇದೀವಿ ಅಂತ. 

ಮುಂದೊಂದು ದಿನ ವಿಮಾನದಲ್ಲಿ ಓಡಾಡೋನು ಬಡತನ ರೇಖೆಗಿಂತ ಕೆಳಗೆ ಬರಬಹುದಾ?        
-ಹರೀಶ್ 

ಶನಿವಾರ, ಏಪ್ರಿಲ್ 4, 2020

ಅನಿಸುತಿದೆ ಯಾಕೋ ಇಂದು

ಕರೋನ ಟೈಮಿನ ವಿರಹಿಯ ಹಾಡು ತಮಾಷೆಗಾಗಿ :-

ಅನಿಸುತಿದೆ ಯಾಕೋ ಇಂದು
ಅವಳಿಗೇ ಕೆಮ್ಮಿದೆ ಎಂದು
ಯಾವುದೋ ದೇಶದಿಂದ
ಹೋದ್ವಾರ ಬಂದಿಹಳೆಂದು
ಆಹಾ ಎಂತ ಘೋರಾ ಯಾತನೇ

ಕೊಲ್ಲು ಹುಡುಗಿ ಒಮ್ಮೆ ನನ್ನಾ
ಕೆಮ್ಮಿ ಕೆಮ್ಮಿನೇ!!   

ಅನಿಸುತಿದೆ ಯಾಕೋ ಇಂದು
ಅವಳಿಗೇ ಕೆಮ್ಮಿದೆ ಎಂದು!!

ಸುರಿಯುವ ಮೂಗದು ತಂದಿದೆ ನನ್ನಲಿ ತಳಮಳ
ಇನ್ಯಾರ ಮನೆಯೊಳಗೆ ನೀನು ಹೋದರೆ ಕಳವಳ 
ಪೂರಾದೇಶವೇ  ರಜಾ ಹೋಗಿದೆ ನೀನು ಇಲ್ಲಿಗೆ ಬಂದಕ್ಷಣ
ನಾ ಖೈದಿ ಆದೆ ಮನೆಯಲೇ

ತಬ್ಬಿ ನನ್ನ ಅಪ್ಪಿಕೊ ಒಮ್ಮೆ
ದೂರದಿಂದನೇ!!

ಅನಿಸುತಿದೆ ಯಾಕೋ ಇಂದು
ಅವಳಿಗೇ ಕೆಮ್ಮಿದೆ ಎಂದು!!

-ಹರೀಶ್ 

ಶನಿವಾರ, ಡಿಸೆಂಬರ್ 23, 2017

ರಾಮಾಶಾಸ್ತ್ರಿ - ಶಂಕರ ಶಾಸ್ತ್ರಿ

ಶಂಕ್ರು ಅದ್ಯಾಕ್ ಹಾಗ್ ಕೂತಿದಿಯೋ!  ಏಳು, ಸಂಜೆ ಐದ್ ಆಯ್ತು, ತಯಾರಾಗು ಒಂದ್ ರೌಂಡ್ ಸಮುದ್ರಬಳಿ ಹೋಗ್ ಬರೋಣ.

ವಾವ್ ನಡಿ ಅಜ್ಜ, ಪಟ್ ಅಂತ ರೆಡಿ ಆಗ್ತೀನಿ ಅಂತ ಧಡಕ್ಕನೆ ಎದ್ದು- ಒಂದು ಕಪ್ಪು ಚಡ್ಡಿ ಒಂದು ದೊಗಲೆ ಟೀಶರ್ಟು ಹಾಕಿ, ತಲೆಗೆ ಒಂದು ಟೋಪಿ ಹಾಕಿದ.

ತಡಿ ಬಂದೆ ಅಂತ ಒಂದು ಬಿಳೀ ಖಾದಿ ಅಂಗಿಯನ್ನು ತಲೆಮೇಲಿಂದ ಹಾಕ್ಕೊಂಡು, ಬಿಳೀ ಪಂಚೆ ಉಟ್ಟು ಎತ್ತುಕಟ್ಟಿದರು, ಕೊಬ್ಬರಿ ಎಣ್ಣೆ ಹಾಕಿದ್ದ ಕಪ್ಪು ಬಿಳಿ ಕೂದಲನ್ನು ಹಿಂದಕ್ಕೆ ಬಾಚಿ, ಹುಬ್ಬಿನ ಮಧ್ಯೆ ಕುಂಕುಮ ಒತ್ತಿ, ಕೋಲು ಹಿಡಿದು - ನಡೀ ಕೂಸೇ ಹೊರಡು!

ಹಾಗೇ!!, ಅಜ್ಜ ಬೇಸಿಗೆ ರಜೆಗೆ ಊರಿಗೆ ಬಂದ ಮೊಮ್ಮಗನ ಜೊತೆ ಹರಟುತ್ತಾ ಸಮುದ್ರದಂಡೆಗೆ ಬಂದು ಒಂದು ಬಂಡೆಯಮೇಲೆ ಕುಳಿತರು-

ಸುಮಾರು ಹೊತ್ತು ಅಲೆಗಳನ್ನೇ ದಿಟ್ಟಿಸುತಿದ್ದ ಶಂಕ್ರ...

ಈ ಅಲೆಗಳನ್ನ ನೋಡ್ತಿದ್ರೆ ಏನ್ ಅನ್ಸತ್ತೋ ಶಂಕ್ರು?

ಅಮ್ಮ ದಿನಾ ಮನೆಯಿಂದ ಆಫೀಸಿಗೆ - ಆಫೀಸಿಂದ ಮನೆಗೆ ಬಂದ್ ಹೋಗೋತರ!!

ಒಳ್ಳೆ ಭ್ರಮೆಗೇಡಿ ನೀನು ಎಂದು ನಗುತ್ತಾ ಪಕ್ಕಕ್ಕೆ ಸರಿದು, ತೋಳನ್ನು ಹಿಡಿದು, ಮುಂದಿನ ವರ್ಷ ಹೈಸ್ಕೂಲ್ ಹೋಗ್ತಿದಿಯ ಇನ್ನು ಅದೇ ಬುದ್ದಿ ಅಂತ ತಲೆಸವರಿದ್ರು.

ಮೊನ್ನೆ ಭಾನುವಾರ ಅಪ್ಪನೊಂದಿಗೆ ಬಾಲ್ಕಾನಿಲಿ ಕೂತು ಮಾತಾಡ್ತಿದ್ದೆ.
ಅಪ್ಪನನ್ನ ಕೇಳ್ದೆ, ಅಪ್ಪಾ, ಸ್ಕೂಲ್ ಮುಗಿದ್ಮೇಲೆ ನೀನ್ ಏನ್ ಮಾಡ್ತಿದ್ದೆ ಅಂತ?

ವಾವ್ ಅದೊಂದು ಅಧ್ಬುತ ಲೋಕ ಶಂಕ್ರು, ಶಾಲೆ ಬಿಟ್ ತಕ್ಷಣ ಮನೆಗ್ ಓಡಿ, ಕೈಕಾಲ್ ಮುಖ ತೊಳ್ಕಂಡ್, ಅಡಿಗೆಮನೆಲ್ ಇದ್ದ ಅಮ್ಮನ್ನ ಹೋಗಿ ಅಪ್ಕೊತಾ ಇದ್ದೆ,
ನಾ ಶಾಲೆಯಿಂದ ಬರೋಹೊತ್ತಿಗೆ ಅವ್ರೆಕಾಳ್ ಉಪ್ಪಿಟ್ಟೋ ಇಲ್ವಾ ಗೊಜ್ಜವಲಕ್ಕಿನೋ ಮಾಡಿ  ಇಟ್ಟಿರ್ತಿದ್ಲು, ಆಹಾ ಅಮ್ಮನ ಆ ಅವಲಕ್ಕಿಯ ರುಚಿಯೋ ರುಚಿ, ಅಷ್ಟೊತ್ತಿಗೆ ಅಪ್ಪನಿಗೆ ಯಾವ್ದೋ ಕಾಲ್ ಬಂದು ಮಾತು ನಿಂತೊಯ್ತು.

ಹೌದೂ! ಅಜ್ಜಿ ಕೆಲ್ಸಕ್ಕೆ ಹೋಗ್ತಿರ್ಲಿಲ್ವಾ ತಾತ?

ಹ ಹ ಇಲ್ಲ ಪುಟ್ಟಾ, ಶಾರದೆಗೆ ಮನೆಯೇ ಆಫೀಸು, ಒಂತರಾ ವರ್ಕ್ ಫಾರ್ ಹೋಂ. ಅವಳಿಗೆ ಮಗಾ ಅಂದ್ರೆ ಪ್ರಾಣ, ದಿನಾ ತರೆಹೇವಾರಿ ತಿಂಡಿ ಮಾಡಿ ತಿನ್ನುಸ್ತಿದ್ಲು, ನಿಂಗೊತ್ತಾ ಶಂಕ್ರು, ನಿಮ್ ಅಜ್ಜಿ ನಿಮ್ಮಪ್ಪ ಹೈಸ್ಕೂಲ್ ಓದ್ಬೇಕಾರು ಬೆಳಗ್ಗೆ ತಿಂಡಿ ತಾನೇ ತಿನ್ನುಸ್ತಿದ್ಲು. ನಿಮ್ಮ ಅಜ್ಜಿ ಶಾಲೆಗೇ ಹೋದವಳಲ್ಲ, ಆದ್ರೆ ಜೈಮಿನಿ ಕುಮಾರವ್ಯಾಸ ಭಾರತಗಳು ಕಂಠಪಾಠವಾಗಿತ್ತು, ಅದೇನು ಕಂಠ ಅಂತೀಯ,
ಗಮಕ ಹಾಡ್ತಾ ಕೂತ್ರೆ, ಸುತ್ತಲಿನೋರು ಪ್ರಪಂಚ ಮರೀತಿದ್ರು.

ಶಾರದೆ ರಾತ್ರಿಯ ಅಡಿಗೆ ಮಾಡುತ್ತಾ ಒಲೆಯಮುಂದೆ ಕೂತಿರುವಾಗ, ಅವಳ ತೊಡೆಮೇಲೆ ಮಲಗಿ, ಗಮಕ ಹೇಳಮ್ಮಾ ಅನ್ನುತ್ತಿದ್ದ ನಿನ್ನಪ್ಪ. ಅವನು ಕೇಳುವುದು ಹೆಚ್ಚೋ ನಾ ಹೇಳುವುದು ಹೆಚ್ಚೋ ಅನ್ನೋ ರೀತಿಲಿ, ಅವನ ತಲೆಕೂದಲು ಹಿಂದೆ ಮಾಡಿ ಹಣೆಗೆ ಒಂದು ಮುತ್ತಿಕ್ಕಿ, ತಲೆ ಸವರುತ್ತಾ ಹಾಡುತ್ತಿದ್ದಳು.
ಇದೇ ರೀತಿ ಮಲಗಿ ಕೇಳಾದಮೇಲೆ, ಒಂದುದಿನ ಎದ್ದು ಕೂತು ಕೇಳಿದ - ಅದೆಷ್ಟು ಸೋಗಸಾಗೆ ಹಾಡ್ತೀ, ನೀ ಇಲ್ ಇರ್ಬಾರ್ದಿತ್ತು ಕಣೇ ಅಮ್ಮ, ಯಾರಾದ್ರು ಸಂಗೀತಗಾರ್ರು ಮನೇಲ್ ಇದ್ದಿದ್ರೆ ಸುಬ್ಲಕ್ಷಿಮಿ ಮೀರುಸ್ತಿದ್ದೆ ಅಂದ,
ಅಯ್ಯೋ ಕೂಸೆ! ನನಿಗೇನ್ ಕಮ್ಮಿ ಆಗಿರೋದು ಈಗ, ಅಣ್ಣಯ್ಯಭಟ್ಟರ ಮಗಳು, ಶಂಕರಶಾಸ್ತ್ರಿಗಳ ಸೊಸೆ, ರಾಮಾಶಾಸ್ತ್ರಿಗಳ ಹೆಂಡತಿ, ನಂಜುoಡಶಾಸ್ತ್ರಿಯ ಅಮ್ಮ ಅಂತ ಹೆಮ್ಮೆಯಿಂದ ನಗುತ್ತಾ ಹೇಳಿದ್ದಳು.

ಕೇಳುತ್ತಾ ಕೇಳುತ್ತಾ ಕಣ್ಣ ಆಲೆಯಲ್ಲಿ ನೀರು ತುಂಬಿತ್ತು ಶಂಕ್ರುಗೆ.
ಅಜ್ಜಾ!, ನನಗೆ ಅಮ್ಮ ಯಾವತ್ತೂ ಗೊಜ್ಜವಲಕ್ಕಿ ಮಾಡಿ ಕಾಯುತ್ತಾ ಕೂತ ನೆನಪೇ ಇಲ್ಲ ಅಂತ ಅಜ್ಜನನ್ನು ತಬ್ಬಿದ.

ಆದರೆ ವರ್ಷಾ ವರ್ಷಾ, ಬೇರೆ ಬೇರೆ ದೇಶಕ್ಕೆ ಕರ್ಕಂಡ್ ಹೋಗಿ ತೋರುಸ್ತಾರಲ್ಲೋ, ನಿನ್ನ ಅಜ್ಜ ಪೂರ್ ಫೆಲ್ಲೋ, ನಿನ್ ಅಪ್ಪನಿಗೆ ಯಾವ ದೇಶಕ್ಕೂ ಕರ್ಕಂಡ್ ಹೋಗ್ಲಿಲ್ಲ ಅಂತ ನಗುತ್ತಾ ಕಿಚಾಯಿಸಿದರು!
ಅದು ಹೌದು, ಆದ್ರೆ ಪಕ್ಕದಲ್ಲಿ ಕೂರುಸ್ಕಂಡು ಕಾರಲ್ಲಿ ಜಗತ್ತು ತೋರ್ಸೋ ಅಪ್ಪನಿಗಿಂತ, ಭುಜದಮೇಲೆ ಕೂರುಸ್ಕಂಡು ಕಾಲಲ್ಲಿ ನಡೆದು ಜಗತ್ತು ತೋರ್ಸೋ ಅಜ್ಜನೇ ಚಂದ ನನಗೆ ಅಂತ ಬಾಚಿ ತಬ್ಬಿದ.

ಸೂರ್ಯ ಮುಳುಗಿದ್ದ! ಕತ್ತಲು ಆವರಿಸಿತ್ತು, ಆದರೆ ದಡಕ್ಕೆ ಅಲೆಗಳು ಬಂದು ಹೋಗುವಿಕೆ ನಿರಂತರ ನಡೆಯುತ್ತಿತ್ತು!

ಭಾನುವಾರ, ಏಪ್ರಿಲ್ 9, 2017

ಮಳೆ ಇಳೆ

ಸಂಜೆ ಐದರ ಸಮಯ, ದಟ್ಟವಾದ ಕಪ್ಪು ಮೋಡ ಸೂರ್ಯನನ್ನು ಮುಚ್ಚಿತ್ತು, ಎತ್ತಲಿಂದಲೋ ಬಂದ ತಂಪು ಗಾಳಿ ತರಗೆಲೆಗಳನ್ನು ತೂರುತ್ತಿತ್ತು, ಆಕಾಶದ ತುಂಬಾ ಮಿಂಚಿನ ಸಂಚಾರ, ಮುಂಗಾರಿನ ಆರ್ಭಟ, ಇನ್ನೇನು ಧುತ್ತನೆ ಸುರಿದೇ ಬಿಡುತ್ತದೆ ಅನ್ನೋವಷ್ಟರಲ್ಲಿ - ತಿಳಿಯಾದ ಆಕಾಶಕಂಡ ಭೂಮಿ ಮಂಕಾದಳು.

ಅಲ್ಲೇ ಕೂತಿದ್ದ ಗರುಡ ಪಕ್ಷಿಯ ಕರೆದು, ನೀ ಮೋಡದೆತ್ತರಕ್ಕೆ ಹಾರ್ತೀಯಲ್ಲಾ, ಹೋಗಿ ಕೇಳಿ ಬರುವೆಯಾ? ಯಾಕೆ ಇಷ್ಟು ಮುನಿಸು ಎಂದು ಸುದ್ದಿ ತರುವೆಯಾ ಅಂದಳು.

ಆಜ್ಞೆಯಂತೆ ಹಾರಿದ ಗರುಡ ಸರಕ್ಕನೆ ಹೋಗಿ ಬಂದು, ಅವನನ್ನು ಯಾರೂ ಕರಿಯಲಿಲ್ಲವಂತೆ, ಪ್ರತೀ ವರ್ಷ ಕರೆದು ಅಪ್ಪಿ ಆಲಂಗಿಸಿ ಆನಂದದಿಂದ ತೊಯ್ದು ಖುಷಿಪಡುತ್ತಿದ್ದ ಮರಗಳು ಇಲ್ಲವಾಗಿದೆಯಂತೆ.

-ಹರೀಶ್ 

ರಾಶಿ ರಾಶಿ ನಕ್ಷತ್ರ

ಹರೀ, ನಿಂದ್ ಯಾವ್ ರಾಶಿನೋ ಅಂತ ತಾತ ಕೇಳಿದ್ರು?
ಆ ದೇವ್ರಿಗೇ ಗೊತ್ತು, ಜೋಳದ್ದೋ ರಾಗೀದೋ ಇರ್ಬೇಕು, ಅದ್ರ ತಲೆ ಬುಡ ಗೊತ್ತಾಗಲ್ಲ ಅಂದೆ.

ಅಯ್ಯೋ ಮಂಕೆ, ಅಷ್ಟು ಓದಿ ದಬಾಕಿದೀನಿ ಅಂತೀಯಾ ಅಷ್ಟು ಗೊತ್ತಾಗಲ್ವೆ ಹೇಳ್ತೀನಿ ಕೇಳು.
ಅದೇ ನಮ್ ಬ್ರಮ್ಮಪ್ಪ ಇದಾನಾಲ ಅವ್ನ ಮಗ ದಕ್ಷನ್ಗೆ 27 ಜನ ಹೆಣ್ ಮಕ್ಳು, ಬೇರೆ ಕೆಲ್ಸಿರ್ಲಿಲ್ವೇ ಅಂತ ಬಾಯ್ ಹಾಕಿದ್ರೆ ತಲೆಮೇಲೆ ತಟ್ತೀನಿ ಪೂರ್ತಿ ಕೇಳು,

ಅವಕ್ಕೆ ಅಶ್ವಿನೀ,ಭರಣೀ,ಕೃತ್ತಿಕಾ,.,...,ರೇವತೀ ಅಂತ 27 ಬೇರೆ ಬೇರೆ ಹೆಸ್ರು ಇಟ್ಟ.
ಎಲ್ಲಾ ಮಕ್ಳು ಬೆಳೆದು ಮದ್ವೆಗೆ ಬಂದ್ವು, ಅದೇನ್ ತಲೆ ಕೆಟ್ಟಿತ್ತೋ ಏನೋ ಉದೋ ಅಂತ ಎಲ್ರುನೂ ನಮ್ ಚಂದ್ರುನ್ಗೆ ಕೊಟ್ಟು ಮದ್ವೆಯಾ ಮಾಡ್ಬುಡದೆ, ಥೋ!

ನಮ್ ಚಂದ್ರನೂ ಭಾರಿ ಖುಳ, ದುಡ್ದು ದುಡ್ದು 9 ಕೋಣೆ ಇರೋ ದೊಡ್ಡ ದೊಡ್ಡ 12 ಮನೆ ಕಟ್ಟಿದ್ದ, ಒಂದೊಂದು ಮನೆಗೂ ಮೇಷ, ವೃಷಭ, ಮಿಥುನ,.,.... ಮೀನ ಅಂತ ಹೆಸ್ರಿಟ್ಟಿದ್ದ.

ಪಾಪ, ಕಟ್ಕಂಡ್ ಮೇಲೆ ಬುಡಾಕಾಯ್ತದಾ, ಇರಾ ಹನ್ನೆಲ್ಡ್ ಮನೇನೇ ಸರ್ಯಾಗಿ ಓಬ್ಬೊಬ್ರಿಗೆ 4 ಕೋಣೆತರ ಮೇಷ ಮನೆಯಿಂದ ಹಂಚಿ ಎಲ್ರುನೂ ಕರ್ದು, ನೀವ್ ನೀವ್ ನಿಮ್ ನಿಮ್ ಕೋಣೆಲಿ ಇರಿ, ನಾನು ದಿನಕ್ ಒಂದ್ ಮನೆಗೆ ಬರ್ತೀನಿ ಅಂದ.

ಇದನ್ ಕೇಳಿದ್ ಹಿರೀ ಹೆಂಡ್ತಿ ಅಶ್ವಿನಿ ಶಾನೆ ಸಿಟ್ಗೆದ್ದು, ಒಂದ್ ಮನೇಲಿ ಮೂರ್ ಮೂರ್ ಹೆಂಡ್ರುನ್ ಮಡ್ಗಿ ಯಾರ್ ಜೊತೆ ಇರ್ತೀರ ಅಂತ ರೇಗಿದ್ಲು.

ಅದನ್ ಕೇಳಿ ಶಾನೆ ತಲೆ ಕೆಡುಸ್ಕಂಡ್ ಚಂದ್ರ ಒಂದ್ ಉಪಾಯವ ಮಾಡಿ, ಒಂದ್ ಕೆಲ್ಸವಾ ಮಾಡಣ, ಈ ದಿನದ್ ಲೆಕ್ಕಾಚಾರ ಬ್ಯಾಡ, ಒಂದೊಂದ್ ಕೋಣೇಲಿ ಆರ್ ಆರ್ ಘಂಟೆ ಇರ್ತೀನಿ ಅಂತ ತೀರ್ಮಾನ ಕೊಟ್ಟ.

ಅಷ್ಟೇ, ನೀನ್ ಹುಟ್ದಾಗ ಚಂದ್ರ ಯಾವ್ ಹೆಂಡ್ತಿ ಜೊತೆ ಇರ್ತಾನೋ ಅದೇ ನಿನ್ ನಕ್ಷತ್ರ, ಅವ್ರ ಮನೆ ಹೆಸ್ರೇ ನಿನ್ ರಾಶಿ.

ಅಜ್ಜೋ ಅಜ್ಜೋ ಅಜ್ಜೋ, ಹಂಗಾರೆ ಅಶ್ವಿನಿ ಮೊದಲ ಪಾದ ಅನ್ನೋ ಬದ್ಲು, ಅಶ್ವಿನಿ ಮೊದಲ ಕೋಣೆ ಅಂದ್ರೆ ಹೆಂಗಿರತ್ತೆ.

ಥೋ ಮುಂಡೇದೆ.

-ಹರೀಶ್

ಮಂಗಳವಾರ, ಡಿಸೆಂಬರ್ 27, 2016

ಪೊಲೀಸ್ ಸ್ಟೋರಿ

ಮೊನ್ನೆ ಭಾನುವಾರ ಬಸವನಗುಡಿಗೆ ಹೋದಾಗ, ಜೀವನದಲ್ಲಿ ನೆಗೆಟಿವ್ ಇರ್ಬಾರ್ದು, ನೊ ಅನ್ನೋ ಪದ ನನ್ನ ಡಿಕ್ಷನರಿಲೆ ಇಲ್ಲ ಅಂತ ಫೀಲಿಂಗ್ಲಿ, ನೊ ಪಾರ್ಕಿಂಗ್ ನ ಪಾರ್ಕಿಂಗ್ ಅನ್ಕೊಂಡು ಗಾಡಿ ನಿಲ್ಸಿದ್ದೆ.
ತಿರುಗಾಡಿ ಬರೋದ್ರೊಳಗೆ ಬೈಕು ಪೊಲೀಸ್ ಮನೆ ಸೇರಿತ್ತು. ಈ ಬ್ಲಾಕ್ ಮನಿ ಇರೋರು ಮೋದಿನ ಬಯ್ಯೋತರ ಬೈಕೊಂಡು ಹೋದೆ.

ಆ ಪೊಲೀಸ್ ಸ್ಟೇಷನ್ಲಿ ನಿಂತಿರೋರೆಲ್ಲ, ಏನೋ ಮುಖ್ಯ ಕೆಲಸಕ್ಕೆ ಬಂದೋ, ಹುಡ್ಗಿ ಕರ್ಕೊಂಡ್ ಬಂದು ಮರ್ಯಾದಿ ಹೋದೋರ್ತರ ಎಲ್ಲಾಕಡೆ ಉರ್ಕೊಂಡಿರೋರು.

ಈ ಗಾಡಿ ಎತ್ತಾಕಂಡು  ಬರೋರು ಪ್ರೈವೇಟ್ ಕಾಂಟ್ರಾಕ್ಟ್, ಅವ್ರು ಪೊಲೀಸ್ ಅಲ್ಲ, ಅದು ಗೊತ್ತಾಗಿ ಒಬ್ಬ ಸ್ವಲ್ಪ ಸದರ ತಗೊಂಡು, ಸಿಟ್ಟಲ್ಲಿ ನೀನ್ ಯಾವ ಶಾ ನೊ ನನ್ ಗಾಡಿ ತಗೊಂಡ್ ಬರಕ್ಕೆ, ಹಾಗೆ ಹೀಗೆ ಅಂದ.

ಅವ್ನಿಗೆ ಉರ್ದೋಗಿ, ಪೊಲೀಸ್ ಕರ್ಕಂಡ್ ಬಂದು, ಸರ್ ಇವ್ನು ಅವಾಚ್ಯ ಶಬ್ದದಿಂದ ಬೈತಾಯಿದಾನೆ ಸರ್, ಶಾX ಅಂತ ಬೈದ ಸರ್ ಅಂದ.
ಅದಕ್ಕೆ ಪೊಲೀಸ್ ಇನ್ನೂ ಒಂದು ಸ್ಟೆಪ್ ಮುಂದೆ ಹೋಗಿ ರಾಗಾತರ ಹೌದಾ ಹಾಗಾದ್ರೆ ಒಂದು ಕೇಸ್ ಫಿಟ್ ಮಾಡಿ ಕೂರ್ಸು ಅಂದ.

ಸಾರ್ ಸಾರ್, ಇವ್ನು ಸುಳ್ಳೇಳ್ತವ್ನೆ, ದೊಡ್ಡ ಪ್ರೆಸ್ಟಿಟ್ಯೂಟ್ ನನ್ಮಗ.

ಇಲ್ಲಾ ಸರ್ ಇವ್ನು ಶಾ ಅಂತ ಬೈದ ನಂಗೆ.

ಲೋ ಅಣ್ತಮ್ಮ, ಯಾರ್ಲಾ ನಿನ್ ಕನ್ನಡ ಮೇಸ್ಟ್ರು, ಶಾ ಅಂದ್ರೆ ಶಾX ಅಂತ ಹೇಳ್ಕೊಟ್ಟೋರು, ಶಾ ಅಂದ್ರೆ ಶಂಖ ಅಲ್ವೇನಲ ಮಳ್ಳೇ.

ನೊ ಕಿ ಮತಲಬ್ ನೊ ಹಿ ಹೋತಹೆ.
ಶಾ ಕಿ ಮಾತಲಬ್ ಶಾX ನಾ ಹೋತಹೆ.

ಭಾನುವಾರ, ಆಗಸ್ಟ್ 21, 2016

ಕಂದನ ಕೂಗು

ಧರಣಿಮಂಡಲ ಮಧ್ಯದೊಳಗೆ 
ಮೆರೆಯುತಿಹ ಕರ್ನಾಟ ರಾಜ್ಯದೊಳಿರುವ
ಕಂದಮ್ಮನೆoಬ ಅಮ್ಮನ ಕಥೆಯನಿಂತು ಕೇಳಿರಿ
ಕಡಿಮೆಯಿರುವ ಸಮಯದೊಳಗೆ
ವಾಚನೋಡುತ ಕಂದನಮ್ಮನು
ಬಳಸಿ ನಿಂತ ಕಂದನನ್ನು
ತಬ್ಬಿ ಹಿಡಿದಳು ಹರುಷದಿ
ಶಾಲೆಯಲ್ಲಿ ಓದಬೇಕು
ಕೊಟ್ಟ ಡಬ್ಬಿಯ ತಿನ್ನಬೇಕು
ಆಟವನ್ನು ಆಡಬೇಕು
ಎಂದು ಅಮ್ಮನು ಹೇಳಲು
ಅಮ್ಮ ಹೇಳಿದ ಮಾತು ಕೇಳಿ
ಎಲ್ಲದಕ್ಕೂ ನಗೆಯನಿತ್ತು
ಬಿಗಿದು ಅಪ್ಪಿ ಕೊರಳ ಹಿಡಿಯಲು
ಅಲ್ಲೆ ತುಂಬಿತು ಕಂಠವು
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
ಇಂದೆಮಗೆ ಪ್ರಾಜೆಕ್ಟು ಸಿಕ್ಕಿತು
ಇದನು ಬೇಗನೆ ಮುಗಿಸಬೇಕು
ಸಂಧಿಗ್ಧವ ಅರಿತುಕೊಳ್ಳಿ
ಎಂದನಾಫೀಸ್ ರಾಯನು
ಒಂದು ಭಿನ್ನಹ ರಾಯ ಕೇಳು
ಕಂದನಿರುವನು ಶಾಲೆಯೊಳಗೆ
ಒಂದು ನಿಮಿಷದಿ ಕರೆದು ಕೊಂಡು
ಬಂದು ಸೇರುವೆ ಇಲ್ಲಿಗೆ
ಬಿಡಲು ಒಲ್ಲೆ ಎಂಬ ಅವಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ಕರೆದು ಒಯ್ಯಲು
ನಾನು ಬಂದೆನು ಇಲ್ಲಿಗೆ
ದಿನವು ಇದುವು ಸಾಧ್ಯವಿಲ್ಲ
ಅವರು ನನ್ನ ಬಿಡುವುದಿಲ್ಲ
ನಾಳೆಯಿಂದ ಪ್ಲೇ ಹೋಮ್ಗೆ
ಹೋಗು ಎಂದಳು ಅಮ್ಮನು
ಆರ ಜೊತೆಯಲಿ ಆಡಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಒಟ್ಟಿಗೆ ಓದಲಮ್ಮ
ಆರು ಮo ಮo ಕೊಡುವರು
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
ಆಯಗಳಿರಾ ಮಿಸ್ಸುಗಳಿರಾ
ನಮ್ಮ ತಾಯೊಡುಹುಟ್ಟುಗಳಿರ
ನಿಮ್ಮ ಕಂದ ಎಂದು ಕಾಣಿರಿ
ನನ್ನ ಈ ಮಗುವನು
ಹಠವ ಹಿಡಿದರೆ ಹೊಡೆಯಬೇಡಿ
ತಪ್ಪುಗೈದರೆ ಗದರಬೇಡಿ
ಕಂದ ನಿಮ್ಮವನೆಂದು ಕಾಣಿರಿ
ನನ್ನ ಈ ಮಗುವನು
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
ಮಗುವ ಪ್ಲೇ ಹೋಮ್ಗೆ ಕಳಿಸಿ
ಸಾವಕಾಶವ ಮಾಡದಂತೆ
ಆಫೀಸಿನ ಸೀಟು ಸೇರಿ
ಸಿಟ್ಟಲೀ ಇವಳೆಂದಳು
ನೆನ್ನೆ ಕೆಲಸವು ಮುಗಿದಿದಿದೆ ಕೋ
ನಾಳೆ ಕೆಲಸವು ಮುಗಿದಿದಿದೆ ಕೋ
ಓ ರಾಯನೆ ನೀನಿದೆಲ್ಲವ
ನೋಡಿ ಸಂತಸದಿoದಿರು
ನೊಂದ ತಾಯಿಯ ಮಾತು ಕೇಳಿ
ಮುಖದಮೇಲೆ ನಗೆಯ ತಂದು
ನನ್ಮನೆದೂ ಇದುವೆ ಗೋಳೆಂದು
ಮುಂದೆ ನಡೆದನು ಕೆಲಸಕೆ
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
-ಹರೀಶ್