ನಾನು ಚಿಕ್ಕವನಿದ್ದಾಗ, ನಮ್ಮ ಮನೆಲಿ ಇದ್ದದ್ದು ನೀರು ಕಾಸಲು ಹಂಡೆಯ ಒಲೆ, ಅಡಿಗೆ ಮಾಡಲು ಸೌದೆ ಒಲೆ. ನಮ್ಮ ಪಕ್ಕದ ಮನೇಲೂ ಅದೇ ಇದ್ದದ್ದು.
ಸ್ವಲ್ಪ ಶ್ರೀಮಂತರ ಮನೆಗೆ ಹೋಗಿ ನೋಡದ ಹೊರೆತು ನಮಗೆ ಗ್ಯಾಸ್ ಒಲೆ, ಬಾಯ್ಲಾರ್ ಗೀಝರ್ ಇದೆ ಅಂತಾನೆ ಗೊತ್ತಿರ್ಲಿಲ್ಲ.
ಹೀಗೆ ಗೊತ್ತಿಲ್ಲದ ಕಾರಣ ಹಂಡೆ ಒಲೆಲಿ ನೀರು ಕಾಸೋದು ಕಷ್ಟ, ಸೌದೆ ಒಲೆಲಿ ಅಡಿಗೆ ಮಾಡೋದು ನರಕ ಅಂತಾರೆ ಅಂತಾನೆ ಗೊತ್ತಿರ್ಲಿಲ್ಲ, ಅದರಲ್ಲೇ ಮಾಡ್ಕಂಡ್ ಜೀವನ ಕಳೀತಾ ಇದ್ವಿ.
ಸುಲಭದ್ದು ಒಂದು ಬಂದಿದೆ, ಅದು ನಮ್ಮ ಹತ್ರ ಇಲ್ಲ ಅನ್ನೋತನಕ ನಾವು ಮಾಡ್ತಾ ಇರೋದು ಕಷ್ಟ ಅಂತ ಅನ್ಸಲ್ಲ…
ಇನ್ನೊಂದು ಉದಾಹರಣೆ ಅಂದ್ರೆ, ಹಿಂದೆ ಇದ್ದದ್ದು ರೈಲು ಮತ್ತೆ ಕೆಂಪು ಬಸ್ಸು, ಬೆಂಗಳೂರಿಗೆ ಬರೋಕೆ ಇಡೀ ದಿನ ಬೇಕಿತ್ತು,ಜನ ಅರಾಮ್ ಬರ್ತಾ ಇದ್ರು,
ರಾಜಹಂಸ ಬಂದಮೇಲೆ - ರಾಜಹಂಸದಲ್ಲಿ ಬರೋರಿಗೆ ಕೆಂಪು ಬಸ್ಸಲ್ಲಿ ಬರೋರ ಬಗ್ಗೆ ಅಯ್ಯೋ ಪಾಪ ಭಾವ ಮೂಡಿತು,
ವೋಲ್ವೋ ac ಬಸ್ಗಳು ಬಂದಮೇಲೆ, ರಾಜಹಂಸದೋರು ಮಿಡಲ್ ಕ್ಲಾಸ್ ಆದ್ರು, ಕೆಂಪು ಬಸ್ ಅವ್ರು ಬಡವರಾದ್ರು,
ಇನ್ನು ಕಾರ್ ಬಂದಮೇಲೆ, ವೋಲ್ವೋ ಬಸ್ ಲಿ ಬರೋರು ಕೂಡ ಮಿಡಲ್ ಕ್ಲಾಸ್ ಆಗೋದ್ರು.
ಹೀಗೆ ಬಡತನ ಅನ್ನೋದರ ಡೆಫಿನಿಷನ್ ಚೇಂಜ್ ಅಗ್ತಾ ಹೋಯ್ತು.
ಹಾಗಾದ್ರೆ ಈಗ ಕೆಂಪು ಬಸ್ ಲಿ ಓಡಾಡೋನು ಬಡವನಾ. ಅಂದರೆ, ಸಂಪಾದನೆ ಹೆಚ್ಚು ಹೆಚ್ಚು ಮಾಡದೇ ಇರೋದು ಬಡತನವಾ?
ಒಂದು ಕಾಲದಲ್ಲಿ ಕೆಂಪು ಹಂಚಿನ ಮನೆ, ಸುಟ್ಟ ಇಟ್ಟಿಗೆ ಮನೆ ಕಟ್ಟಿದ್ರೆ ಅದೇ ಶ್ರೀಮಂತಿಕೆಯ ಕುರುಹು ಯಾಕೆ ಅಂದ್ರೆ ಎಲ್ಲ ಕಟ್ಟುತಾ ಇದ್ದದ್ದು ಮಣ್ಣಿನ ಗೋಡೆ ಮತ್ತೆ ಕರಿ ಹಂಚಿನ ಮನೆಗಳನ್ನ.
ಈಗ ಕೆಂಪು ಹಂಚಿನ ಮನೆಗಳು ಬಡತನದ ಕುರುಹಾಗಿದೆ.
ಸೈಕಲ್ ಇದ್ದೋನು ಶ್ರೀಮಂತ ಅನ್ನೋ ಕಾಲ ಒಂದು, ಈಗ ಸೈಕಲ್ ಲಿ ಓಡಾಡೋನು ಬಡವ.
ಕೀಪ್ಯಾಡ್ ಇದ್ದ ಮೊಬೈಲ್ ಫೋನ್ ಒಂದು ಕಾಲದ ಶ್ರೀಮಂತಿಕೆ, ಈಗ...
ಮನೆಯಲ್ಲಿ ರೇಡಿಯೋ,ಟೇಪ್ರೆಕಾರ್ಡರ್ ಇದ್ದ ಕಾಲ ಶ್ರೀಮಂತಿಕೆ, ಈಗ..
ಮನೆಯಲ್ಲಿ ಬ್ಲಾಕ್ ಅಂಡ್ ವೈಟ್ ಟಿವಿ ಇದ್ದ ಕಾಲ ಶ್ರೀಮಂತಿಕೆ, ಈಗಲು ಅದೇ ಇರೋ ಮನೆ..?
ಇರೋಕೆ ಒಂದು ಸಾಧಾರಣ ಹಂಚಿನ ಮನೆ, ಊರಲ್ಲಿ ಸುತ್ತಾಡೋಕೆ ಒಂದು ಸೈಕಲ್, ಮನೋರಂಜನೆಗೆ ಒಂದ್ ಬ್ಲಾಕ್ ಅಂಡ್ ವೈಟ್ ಟಿವಿ,
ನೆಂಟರ ಬಳಿ ಮಾತಾಡೋಕೆ ಒಂದು ಚಿಕ್ಕ ಫೋನು.ಸಮಾರಂಭಗಳಿಗೆ ಹೋಗಿ ಬರೋಕೆ ಕೆಂಪು ಬಸ್ಸು ಅಥವಾ ರೈಲಿಗೆ ಆಗೋ ಅಷ್ಟು ಖರ್ಚು.
ಇವೆಲ್ಲವನ್ನೂ ಸಂಬಾಳಿಸೋವಷ್ಟು ಸಂಬಳ ಬಂದರೆ ಒಂದು ಕಾಲದಲ್ಲಿ ನಿಮ್ಮನ್ನ ಶ್ರೀಮಂತ ಅಂತ ಕರೀತಾ ಇದ್ರು! ಆದರೆ ಈಗ ಸರ್ಕಾರಗಳು ಇವರನ್ನ ಬಡವ ಅಂತ ಹೇಳಿ, ಎಲ್ಲ ಭಾಗ್ಯಗಳನ್ನು ಸುರಿಯತ್ತೆ. ಬಡತನ ನಿರ್ಮೂಲನೆ ಮಾಡ್ತಾ ಇದೀವಿ ಅಂತ.
ಮುಂದೊಂದು ದಿನ ವಿಮಾನದಲ್ಲಿ ಓಡಾಡೋನು ಬಡತನ ರೇಖೆಗಿಂತ ಕೆಳಗೆ ಬರಬಹುದಾ?
-ಹರೀಶ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ