ಮನೆಯಲ್ಲಿ ಎಲ್ಲರೂ ಧರ್ಮಸ್ಥಳಕ್ಕೆ ಹೋಗಲು ಸಿದ್ದತೆ ನಡೆಸಿದ್ದರು. ಶನಿವಾರ ಹೊರಟದ್ದರಿಂದ ನಾನೂ ಜೊತೆಗೆ ಹೊರಡಲು ಒಪ್ಪಿ ಹೊರಟೆ.ಮೊದಲು ಸುಬ್ರಹ್ಮಣ್ಯಕ್ಕೆ ಹೋಗಿ ಮಗನನ್ನು ನೋಡಿ ಆಮೇಲೆ ಅಪ್ಪನನ್ನು ನೋಡೂದು ಅಂತ ತೀರ್ಮಾನಕ್ಕೆ ಬಂದು ಬೆಂಗಳೂರಿನಿಂದ ಕಾರಿನಲ್ಲಿ ಹೊರಟೆವು. ಬೆಳಗ್ಗೆ ೫ ಗಂಟೆಗೆ ಬಿಟ್ಟದ್ದಕ್ಕೆ ಹಾಸನ,ಸಕಲೇಶಪುರ ಮಾರ್ಗವಾಗಿ ಶಿರಾಡಿ ಘಾಟಿ ಇಳಿದು ೯:೩೦ ಕ್ಕೆ ಸುಬ್ರಹ್ಮಣ್ಯ ತಲುಪಿದೆವು.
ದರ್ಶನದ ಎಲ್ಲರೀತಿಯ ತಯಾರಿಯನ್ನು ಮುಗಿಸಿ ದೇವಸ್ಥಾನಕ್ಕೆ ಹೋದೆವು. ಅಬ್ಬಾಎಂತಹ ಜನ ಜಂಗುಳಿ!, ನೋಡುತ್ತಿದ್ದಂತೆ ಬೆವರಿದೆ. ಹಾಗೆ ಸರದಿ ಸಾಲಿನಲ್ಲಿ ನಿಂತು ಬೆವೆತು ಸುಸ್ತಾಗಿ ಭಗವಂತನ ಮೂರ್ತಿಯ ಮುಂದೆ ನಿಂತೆ. ಕೈ ಮುಗಿದು ಹೊರ ಬಂದೆ ಅಷ್ಟೆ. ಇಷ್ಟಕ್ಕೆ ಎಷ್ಟು ದೂರದ ಊರಿನಿಂದ ಬರುತ್ತಾರೆ ಜನ? ಭಗವಂತನ ಮಹಿಮೆ ಅಪಾರ ಅಂತ ನೆನೆಯುತ್ತಾ ಊಟ ಮುಗಿಸಿ ಧರ್ಮಸ್ಥಳಕ್ಕೆ ಹೊರಟೆವು.
ಆ ಹೋಗುವ ದಾರಿಯೇ ದಕ್ಷಿಣ ಕನ್ನಡದ ಸೆಕೆಯನ್ನು ಸಾರುತ್ತಿತ್ತು. ಸಮುದ್ರರಾಜ ತನ್ನ ಬೃಹತ್ ಬಾಹುಗಳಿಂದ ಭಾಸ್ಕರನನ್ನು ಬೆಸೆಯುವೆ ಎಂಬ ಬಾಲಿಶವಾದ ಭ್ರಮೆಯಿಂದ ಬೆವೆತು ಉಪ್ಪಾಗಿ ನಮ್ಮನ್ನೂ ಬೆವರಿನ ಮಡುವಿಗೆ ನೂಕಿದ್ದಾನೇನೋ ಎಂದು ಶಪಿಸುತ್ತಾ ಕಾರಿನ ಎಸಿ ಹಾಕಿ ಧರ್ಮಸ್ಥಳ ತಲುಪಿದೆವು.
ಎಲ್ಲಿ ನೋಡಿದರೂ ದೈವಭಕ್ತರು, ಎಲ್ಲೆಲ್ಲೂ ಭಗವಂತನ ನಾಮಸ್ಮರಣೆಯ ಹಾಡುಗಳು, ಪ್ರತಿ ಅಂಗಡಿಯಲ್ಲೂ ತೀರ್ಥ,ಪ್ರಸಾದ ಹಾಗೂ ಮಂಜುನಾಥನ ಚಿತ್ರಪಟ. ಆಸ್ತಿಕನಿಗೆ ಅಕ್ಷರಶಹ ಕೈಲಾಸಕ್ಕೆ ಬಂದ ಅನುಭವ.
ಅದೇ ನಾಸ್ತಿಕನಿಗೆ,ಬರೀ ಜನ ಜಂಗುಳಿ, ಭಗವಂತನ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿರುವ ಮಳಿಗೆಗಳು, ಇನ್ನು ಅಲ್ಲಿನ ಹಾಡುಗಳು ಧ್ವನಿ ಮುದ್ರಣ ಮಾರಲು ಹಾಕಿರುವ ಜಾಹಿರಾತಿನಂತೆ.ಒಟ್ಟಿನಲ್ಲಿ ಮಂಜಿನಲ್ಲಿರಬೇಕಾದ ಮಂಜುನಾಥ ಬೆವರಿನ ಮಡುವಿನಲ್ಲಿ ಬಂದು ಬಿದ್ದoತೆ ತೋರುತ್ತಿತ್ತು.
ದರ್ಶನಕ್ಕೆಂದು ಸರದಿ ಸಾಲಿನಲ್ಲಿ ನಿಂತೆವು. ಕಿಲೋಮೀಟರ್ ಉದ್ದದ ಸಾಲು. ಬೆವೆತೂ ಬೆವೆತೂ ಸಾಕಾಗಿ ಈ ಮಂಜುನಾಥನಿಗೆ ಏನಾಯ್ತು ಇಂತಹ ಜಾಗದಲ್ಲಿ ಬರಲು, ಅವನ ಹೆಸರಿಗೆ ತದ್ವಿರುದ್ದವಾದ ಜಾಗ ಎನ್ನುತ್ತಾ ಆವರಣ ತಲುಪಿ ದರ್ಶನ ಪಡೆಯುವ ಹೊತ್ತಿಗೆ ಸ್ನಾನವಾದಂತಾಗಿತ್ತು. ಊಟ ಮುಗಿಸಿ ಮಲಗಿ ಬೆಳಗ್ಗೆ ಬೇಲೂರು ಹಳೇಬೀಡು ನೋಡಲು ಹೊರಟೆವು.
ಬೇಲೂರಿನ ಕೇಶವ ಹಾಗೂ ಹಳೇಬೀಡಿನ ಶಾoತಳೇಶ್ವರ ಎರಡೂ ಸುಂದರ ಮೂರ್ತಿಗಳು. ಇಲ್ಲಿಗೆ ಬಂದಾಗ ಒಂದು ಆಶ್ಚರ್ಯ ಕಾದಿತ್ತು. ಖಾಲಿ ಖಾಲಿಯಾದ ದೇವಸ್ಥಾನದ ಆವರಣಗಳು. ಎಷ್ಟು ಹೊತ್ತು ಬೇಕಾದರೂ ಭಗವಂತನ ಮುಂದೆ ನಿಂತು ಪ್ರಾರ್ಥಿಸಲು ಅವಕಾಶವಿರುವ ಪ್ರಶಾoತ ಸ್ಥಳ. ಅರೆ ಎರಡೂ ಭಗವಂತನಿರುವ ಜಾಗಗಳೆ, ಅಲ್ಲಿಗೂ ಇಲ್ಲಿಗೂ ಇಷ್ಟೋoದು ಬೇಧವೇಕೆ? ಹಾಗಾದರೆ ಭಕ್ತನ ಪ್ರಕಾರ ದೈವದ ಶಕ್ತಿ ಯಾವುದರ ಮೇಲೆ ಅವಲಂಬಿತ?. ಜನಜಂಗುಳಿಯ ಮೇಲೊ? ಸ್ಥಳಪ್ರಭಾವದ ಮೇಲೊ? ಅಥವಾ ಸ್ಥಳದ ಬಲವಾದ ಕಥೆಯ ಮೇಲೊ?
ಭಕ್ತರ ಬಯಕೆಯನ್ನು ಈಡೇರಿಸುವವನು ಈಶ್ವರನಾದಮೇಲೆ ಅವನ ಶಕ್ತಿಯನ್ನು ಒಂದೊಂದು ಮೂರ್ತಿಯಲ್ಲಿ ಒಂದೊಂದುತರಹ ಊಹೆ ಮಾಡಿದ್ದೇಕೆ? ಅರ್ಥವಾಗದ ಎಷ್ಟೋ ಪ್ರಶ್ನೆಗಳು ವ್ಯರ್ಥವಾದಂತೆ ಎಂದು ಭಾವಿಸಿ, ಹುಲು ಮಾನವರು ನಾವು ಎಂದೆನಣಿಸಿ ಕೈ ಮುಗಿದು ಹೊರಟೆ.
-ಹರೀಶ್